ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸಿದ್ಧ, ಇದರರ್ಥ ಅದರಲ್ಲಿ ಸಮಸ್ಯೆ ಇದೆ ಎಂದಲ್ಲ: ನರೇಂದ್ರ ಸಿಂಗ್ ತೋಮರ್

Feb 5, 2021

ರೈತರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬದ್ಧರಾಗಿದ್ದು, ರೈತರ ಆದಾಯ ದುಪ್ಪಟ್ಟು ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿದ್ದು, ಈ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಿದೆ. ಇದರರ್ಥ ಅದರಲ್ಲಿ ಸಮಸ್ಯೆ ಇದೆ ಎಂದಲ್ಲ. ಕೆಲವೊಂದು ರಾಜ್ಯಗಳಲ್ಲಿನ ಜನರಿಗೆ ಕೃಷಿ ಕಾಯ್ದೆ ಬಗ್ಗೆ ತಪ್ಪು ಮಾಹಿತಿ ರವಾನೆಯಾಗಿದೆ ಎಂದು ರಾಜ್ಯಸಭೆಯಲ್ಲಿ ಮಾತನಾಡಿದ ತೋಮರ್ ಹೇಳಿದ್ದಾರೆ.

ಕೃಷಿ ಕಾನೂನು ಜಾರಿಯಾದರೆ ರೈತರ ಕೃಷಿ ಭೂಮಿಯನ್ನು ಬೇರೆಯವರು ಕಬಳಿಸುತ್ತಾರೆ ಎಂಬ ತಪ್ಪು ಮಾಹಿತಿ ರೈತರಿಗೆ ನೀಡಲಾಗಿದೆ. ಕೃಷಿ ಕಾಯ್ದೆಯಲ್ಲಿ ಯಾವುದಾದರೊಂದು ಅಂಶ ಈ ರೀತಿ ಹೇಳುತ್ತಿದೆಯೇ ಎಂಬುದನ್ನು ನನಗೆ ತೋರಿಸಿ. ರೈತರ ಚಳವಳಿಯ ಪ್ರಮುಖ ವಿಷಯ ಕನಿಷ್ಠ   ಬೆಂಬಲ ಬೆಲೆ  (ಎಂಎಸ್‌ಪಿ) ಆಗಿದೆ. ಉತ್ಪಾದನಾ ವೆಚ್ಚಕ್ಕಿಂತ ಶೇ 50ರಷ್ಟು ಹೆಚ್ಚಿನ ದರದಲ್ಲಿ ಇದನ್ನು ಒದಗಿಸಲಾಗುತ್ತಿದೆ. ಆತ್ಮ ನಿರ್ಭರ ಪ್ಯಾಕೇಜ್ ಅಡಿಯಲ್ಲಿ ₹ 1 ಲಕ್ಷ ಕೋಟಿ ಹಣವನ್ನು ಕೃಷಿ ಮೂಲಸೌಕರ್ಯಕ್ಕೆ ನೀಡಲಾಗಿದೆ. ಅಗತ್ಯವಿರುವಷ್ಟು ಹೂಡಿಕೆ ಕೃಷಿ ವಲಯಕ್ಕೆ ತಲುಪಿದೆ ಎಂದು ಖಾತ್ರಿ ಪಡಿಸಲು ನಾವು ಪ್ರಯತ್ನಿಸಿದ್ದೇವೆ. 

ರೈತರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬದ್ಧರಾಗಿದ್ದು, ರೈತರ ಆದಾಯ ದುಪ್ಪಟ್ಟು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಈ ಹಣಕಾಸು ವರ್ಷದ ಕೇಂದ್ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು ಕೃಷಿ ವಲಯಕ್ಕೆ ₹ 2.83 ಲಕ್ಷ ಕೋಟಿ ಅನುದಾನ ನೀಡಿತ್ತು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಕಳೆದ 71 ದಿನಗಳಿಂದ ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶನಿವಾರ ಮೂರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ (ಚಕ್ಕಾ ಜಾಮ್) ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ಚಕ್ಕಾ ಜಾಮ್ ವೇಳೆ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಲಿದ್ದು, ವಾಹನದಲ್ಲಿರುವವರಿಗೆ ರೈತರು ಆಹಾರ ಮತ್ತು ನೀರು ನೀಡಲಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘಟನೆ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.

Source:TV9 Kannada