ರಾಜ್ಯದಲ್ಲಿ ಪೊಗರು ಸಿನಿಮಾದ ಭರ್ಜರಿ ಹವಾ; ಕೊರೊನಾ ನಂತರ ಥಿಯೇಟರ್ ಹೌಸ್​ಫುಲ್

Feb 19, 2021

ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ನೋಡಲು ಬೆಳ್ಳಳ ಬೆಳಿಗ್ಗೆಯೇ ಥಿಯೇಟರ್​ ಬಾಗಿಲ ಮುಂದೆ ಜನ ಜಂಗುಳಿ ಆವರಿಸಿದೆ. ಬೆಂಗಳೂರು, ಹುಬ್ಬಳ್ಳಿ, ಗದಗ ಸೇರಿದಂತೆ ಬಾಗಲಕೋಟೆಯಲ್ಲಿ ಚಿತ್ರ ನೋಡಲು ಜನ ಮುಗಿಬಿದ್ದಿದ್ದಾರೆ.

ಬೆಂಗಳೂರು: ಕೊರೊನಾದ ನಂತರ ಮೊದಲ ಬಾರಿಗೆ ಥಿಯೇಟರ್​ಗಳು ಹೌಸ್​ ಫುಲ್​ ಆಗಿವೆ. ಕೊರೊನಾ ಲಾಕ್​ಡೌನ್​ನಿಂದಾಗಿ ಬೇಸತ್ತಿದ್ದ ಜನರಿಗೆ ಮನೋರಂಜರನೆ ಇಲ್ಲದಂತಾಗಿತ್ತು. ಚಿತ್ರ ತೆರೆ ಮೇಲೆ ಬರುವುದನ್ನು ಕಾಯ್ದು ಕುಳಿತಿದ್ದರು. ಇದೀಗ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾ ಕೊರೊನಾ ನಂತರದ ಮೊದಲ ಚಿತ್ರವಾಗಿ ಇಂದು ಬಿಡುಗಡೆಗೊಂಡಿದೆ.  ಕೊರೊನಾ ಮರೆತು, ಜನ ಥಿಯೇಟರ್​ಗಳನ್ನು ಎಡತಾಕುತ್ತಿದ್ದಾರೆ. ಹಾಗಾದರೆ ಎಲ್ಲೆಲ್ಲಿ ಪೊಗರು ಅಬ್ಬರ ಜೋರಾಗಿದೆ ಎಂಬುದನ್ನು ನೋಡೋದಾದ್ರೆ.. 

ರಾಜಧಾನಿಯಲ್ಲಿ.. ಚಿತ್ರ ನೋಡಲು ಧ್ರುವ ಜೊತೆ ತಾಯಿ ಅಮ್ಮಾಜಿ ಆಗಮಿಸಿದ್ದು, ಇವರೊಡನೆ ಅರ್ಜುನ್ ಸರ್ಜಾ ಕೂಡ ಆಗಮಿಸಿದ್ದಾರೆ. ಜೊತೆಗೆ ನಿರ್ದೇಶಕ ನಂದ ಕಿಶೋರ್, ನಿರ್ಮಾಪಕ ಬಿ.ಕೆ. ಗಂಗಾಧರ್ ಜೊತೆ ಚಿತ್ರತಂಡ ಆಗಮಿಸಿದೆ. ಸ್ಟಾರ್​ಗಳನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಜನರನ್ನು ಕಂಟ್ರೋಲ್​ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪೊಲೀಸರ ಮಾತು ಕೇಳದ ಕೆಲ ಅಭಿಮಾನಿಗಳಿಗೆ ಪೊಲೀಸರು ಲಾಠಿ ಚಾರ್ಜ್​ ರುಚಿ ತೋರಿಸಿದ್ದಾರೆ.

ಗಾಂಧೀನಗರದಲ್ಲಿ ಪೊಗರು ಅಬ್ಬರ
ನರ್ತಕಿ ಥಿಯೇಟರ್​ಗೆ ಆಗಮಿಸಿ ಅಭಿನಿಮಾನಿಗಳ ಜೊತೆ ಚಿತ್ರತಂಡ ಸಿನಿಮಾ ನೋಡಿದ್ದಾರೆ. ಚಿತ್ರ ತಂಡಕ್ಕೆ ಕೇರಳದ ಚೆಂಡೆ ಸೇರಿದಂತೆ, ವಾದ್ಯ ಮೇಳದ ಜೊತೆಗೆ ಸ್ವಾಗತ ಕೋರಲಾಗಿದೆ. ನರ್ತಕಿ, ಪೊಗರು ರಿಲೀಸ್ ಆಗುತ್ತಿರುವ ಪ್ರಮುಖ ಚಿತ್ರಮಂದಿರ.

ಹುಬ್ಬಳ್ಳಿಯಲ್ಲೂ ಮಿಂಚಿದ ಪೊಗರು
ಹುಬ್ಬಳ್ಳಿ ಜನತೆ ಪೊಗರು ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಿದ್ದಾರೆ. ನಟ ಧ್ರುವ ಸರ್ಜಾ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದು, ಪೌರ ಕಾರ್ಮಿಕರಿಗೆ ಶಾಲು ಹಾಕಿ ಸನ್ಮಾನಿಸಿ, ಸೀರೆ ವಿತರಿಸಿದ್ದಾರೆ. ಚಿತ್ರ ಯಶ್ವಸಿಯಾಗಲಿ ಎಂದು ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಗದಗದಲ್ಲಿ ಪೊಗರು ಸಿನಿಮಾದ ಭರ್ಜರಿ ಹವಾ
ಮಹಾಲಕ್ಷ್ಮಿ ಥಿಯೇಟರ್​ನಲ್ಲಿ ಇಂದು ಪೊಗರು ಪ್ರದರ್ಶನಗೊಂಡಿದೆ. ಜನ ಜಂಗುಳಿ ಹೆಚ್ಚಿದ್ದ ಕಾರಣ ಕುಳಿತುಕೊಳ್ಳಲು ಚೇರ್​ ಸಿಗದೇ ಅಭಿಮಾನಿಗಳು ನಿಂತು ಸಿನಿಮಾ ನೋಡಿದ್ದಾರೆ. ಲಾಕ್​ಡೌನ್ ಬಳಿಕ ಗದಗನಲ್ಲಿ ಮೊದಲ ಚಲನಚಿತ್ರ ಪ್ರಮುಖ ಪ್ರದರ್ಶನವಾದ್ದರಿಂದ, ಖುಷಿಯಿಂದ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ.

ಬಾಗಲಕೋಟೆಯಲ್ಲಿ ಪೊಗರು ಹವಾ ಜೋರು
ಅಭಿಮಾನಿಗಳು ನಟ ಧ್ರುವ ಸರ್ಜಾ ಬೃಹತ್ ಕಟೌಟ್ ನಿಲ್ಲಿಸಿ ಕ್ಷೀರಾಭಿಷೇಕ ಮಾಡಿದ್ದಾರೆ. ಕುಂಕುಮ, ಅರಿಶಿಣದ ನೀರಿನ ಅಭಿಷೇಕ ಮಾಡಿದ್ದಾರೆ. ನೆಚ್ಚಿನ ನಟನ ಚಿತ್ರಕ್ಕೆ ಜೈಕಾರ ಹಾಕಿ ಧ್ರುವ ಸರ್ಜಾ ಪರ ಘೋಷಣೆಗಳನ್ನ ಕೂಗಿ ಸಂಭ್ರಮಿಸಿದ್ದಾರೆ. ಥಿಯೇಟರ್​ ಮುಂದೆ ಜಮಾಯಿಸಿದ ಜನ, ಒಮ್ಮೆಯಾದರೂ ಧ್ರುವ ಸರ್ಜಾ ಬಾಗಲಕೋಟೆಗೆ ಬರಲಿ ಎಂದು ಮನವಿ ಮಾಡಿದ್ದಾರೆ.

Source: TV9Kannada