SSLC ಶುಲ್ಕದ ಲೆಕ್ಕದಲ್ಲಿ ಶಾಲೆ ಕಳ್ಳಾಟ; ಫುಲ್ ಫೀಸ್ ಕಟ್ಟಿದ ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್
ಬೆಂಗಳೂರು: ಶಾಲೆ ಶುಲ್ಕ ಪೂರ್ತಿ ಕಟ್ಟಿದವರಿಗೆ ಪೂರ್ಣ ಅಂಕ ಮತ್ತು ಶಾಲೆ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿರುವುದಾಗಿ ಶಾಲೆ ಆಡಳಿತ ಮಂಡಳಿ ವಿರುದ್ಧ ಪೋಷಕರು ಮತ್ತು ವಿದ್ಯಾರ್ಥಿಗಳು (Students) ಆರೋಪಿಸಿದ್ದು, ಈ ಸಂಬಂಧ ತಮಗೆ ನ್ಯಾಯ ಕೊಡಿಸುವಂತೆ ಬಿಇಒಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಸಹಕಾರ ನಗರದಲ್ಲಿರುವ ಖಾಸಗಿ ಶಾಲೆ ನಾರಾಯಣ ಒಲಂಪಿಯಾಡ್ ವಿರುದ್ಧ, ಯಲಹಂಕ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪುಲ್ ಫೀಸ್ ಕಟ್ಟದ ವಿದ್ಯಾರ್ಥಿಗಳ ಅಂಕ ಕಡಿತಗೊಳಿಸಿದ್ದಾರೆ. ಪೂರ್ತಿ ಶುಲ್ಕ ಕಟ್ಟಿದವರಿಗೆ ಶೈಕ್ಷಣಿಕ ಸಾಧನೆ ಇಲ್ಲದೇ ಇದ್ದರೂ ಪೂರ್ತಿ ಅಂಕ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಾರಾಯಣ ಒಲಂಪಿಯಾಡ್ ಶಾಲೆ
ಕೊರೊನಾ ಹಿನ್ನಲೆ ಸಿಬಿಎಸ್ಸಿ ಪರೀಕ್ಷೆ ರದ್ದು ಮಾಡಿತ್ತು. ಹೀಗಾಗಿ ಮೌಲ್ಯಾಂಕನ, ಪೂರ್ವ ಸಿದ್ಧತಾ ಪರೀಕ್ಷೆ, ಪ್ರಾಯೋಗಿಕ ಅಂಕಗಳ ಮೇಲೆ ಎಸ್ಎಸ್ಎಲ್ ಸಿ ಫಲಿತಾಂಶಕ್ಕೆ ಬೋರ್ಡ್ ಸೂಚಿಸಿತ್ತು. ಆದರೆ ಕೆಲ ಖಾಸಗಿ ಶಾಲೆಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಪುಲ್ ಫೀಸ್ ಕಟ್ಟಿದವರಿಗೆ ಪುಲ್ ಮಾರ್ಕ್ಸ್ ಕಟ್ಟದವರಿಗೆ ಜಸ್ಟ್ ಪಾಸ್ ಎಂದು ಫಲಿತಾಂಶ ನೀಡಿದೆ. ಎಲ್ಲ ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ಬಂದರೂ ಫಲಿತಾಂಶಕ್ಕೆ ಹಿನ್ನಡೆಯಾಗಿರುವುದರಿಂದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ರಾಯಚೂರು: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ಆರೋಪ
ಆಗಸ್ಟ್ 4 ರಂಸು ಪ್ರಕಟವಾದ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಯಚೂರಿನ ಶ್ರೀ ಚೈತನ್ಯ ಶಾಲೆ ಬಳಿ ಪೋಷಕರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ವಿದ್ಯಾರ್ಥಿಗಳಿಗೆ ಮನಸೋಇಚ್ಛೆ ಅಂಕ ನೀಡಿರುವ ಆರೋಪ ಎದುರಾಗಿದ್ದು, ಶ್ರೀ ಚೈತನ್ಯ ಶಾಲೆಯು ಸಿಬಿಎಸ್‌ಇ ಬೋರ್ಡ್‌ಗೆ ತಪ್ಪು ಮಾಹಿತಿ ರವಾನೆ ಮಾಡಿದೆ ಎಂದು ಶ್ರೀ ಚೈತನ್ಯ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಕೇಳಿ ಬಂದಿದೆ. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಎಸ್ಸಿ 10 ನೇ ತರಗತಿ ಫಲಿತಾಂಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಪ್ರಾಥಮಿಕ ಹಾಗೂ ಮಧ್ಯಂತರ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಿದೆ. ಅದ್ರೆ ಕಡಿಮೆ ಅಂಕ ಪಡೆದಿದ್ದವರಿಗೆ ಫೈನಲ್ನಲ್ಲಿ ಹೆಚ್ಚು ಅಂಕ ನೀಡಿದ ಆರೋಪ ಕೇಳಿಬಂದಿದೆ. ಹೆಚ್ಚು ಅಂಕ ಪಡೆದಿದ್ದ ಟಾಪರ್ಸ್ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಲಾಗಿದೆ ಎಂಬ ಆರೋಪ ಎದುರಾಗಿದೆ. ಹೀಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು ಅದನ್ನು ಸರಿಪಡಿಸುವಂತೆ ಶಾಲೆಗೆ ನುಗ್ಗಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಇನ್ನು, ಶಾಲಾ ಮುಖ್ಯೋಪಾಧ್ಯಾಯರು ಪೋಷಕರ ಆಕ್ಷೇಪಕ್ಕೆ ಉತ್ತರಿಸದೇ ಪಲಾಯನವಾದ ಮಾಡಿದ್ದಾರೆ. ಇದರಿಂದ ಅನ್ಯಾಯ ಸರಿಪಡಿಸುವಂತೆ ಪೋಷಕರು ನಗರದದಲ್ಲಿರುವ ಶ್ರೀಚೈತನ್ಯ ಶಾಲೆ ಬಳಿ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
Source: Tv9 kannada