ಓಲಾ-ಉಬರ್​ ಮಾದರಿಯಲ್ಲೇ ಹೊಸ ಆ್ಯಪ್​ ಅಭಿವೃದ್ಧಿಗೆ ರಾಜ್ಯ ಸರ್ಕಾರ ಚಿಂತನೆ

Aug 1, 2023

ಓಲಾ ಮತ್ತು ಉಬರ್‌ ಮಾದರಿಯಲ್ಲೇ ಆಟೋ ಮತ್ತು ಟ್ಯಾಕ್ಸಿ ಬುಕಿಂಗ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಬೆಂಗಳೂರು, ಆ.01: ಓಲಾ ಮತ್ತು ಉಬರ್‌ನಂತಹ ಖಾಸಗಿ ಕ್ಯಾಬ್ ಸೇವೆಯನ್ನು ಹೋಲುವಂತಹ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಬುಕಿಂಗ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ತಮ್ಮ ಇಲಾಖೆ ಚಿಂತಿಸುತ್ತಿದೆ ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga Reddy) ಸೋಮವಾರ ತಿಳಿಸಿದರು.

ನಗರದಲ್ಲಿ ಆಟೋಗಳು ಮತ್ತು ಕ್ಯಾಬ್‌ಗಳಿಗಾಗಿ ಆ್ಯಪ್ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಟೋ ಮತ್ತು ಕ್ಯಾಬ್ ಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ನಾವು ಖಾಸಗಿ ಕ್ಯಾಬ್ ಬುಕ್ಕಿಂಗ್ ಮಾದರಿಯಲ್ಲೇ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ. ಜೊತೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆಟೋ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲು ನಮ್ಮ ಇಲಾಖೆ ಬಿಎಂಆರ್‌ಸಿಎಲ್​ಗೆ ಮನವಿ ಮಾಡಲಿದೆ ಎಂದು ಅವರು ಹೇಳಿದರು.

ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರ ರಸ್ತೆ ತೆರಿಗೆ ಮತ್ತು ಶಕ್ತಿ ಯೋಜನೆಯ ಪರಿಣಾಮದ ಕುರಿತು ತಮ್ಮ ಬೇಡಿಕೆಗಳನ್ನು ಚರ್ಚಿಸಲು ಮತ್ತು ಪರಿಹರಿಸಲು ಖಾಸಗಿ ಸಾರಿಗೆ ಒಕ್ಕೂಟಗಳೊಂದಿಗೆ ಎರಡನೇ ಸುತ್ತಿನ ಸಭೆ ನಡೆಸಿದರು. ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಯನ್ನು ವಿರೋಧಿಸಿ 23 ಖಾಸಗಿ ಸಾರಿಗೆ ಸಂಸ್ಥೆಗಳು ಮತ್ತು ಒಕ್ಕೂಟಗಳು ಬೆಂಗಳೂರು ಸಾರಿಗೆ ಬಂದ್‌ಗೆ ಕರೆ ನೀಡಲು ನಿರ್ಧರಿಸಿದ್ದವು. ಆದರೆ ಸಚಿವರೊಂದಿಗಿನ ಸಭೆಯ ನಂತರ ಜುಲೈ 27 ರಂದು ಮುಷ್ಕರದ ಕರೆಯನ್ನು ಸಂಘಗಳು ಹಿಂಪಡೆದಿವೆ.

Source: TV9 KANNADA