NEET 2021: ಸೆ. 12ರ ನೀಟ್ ಪರೀಕ್ಷೆ ಮುಂದೂಡಿಕೆಗೆ ವಿದ್ಯಾರ್ಥಿಗಳ ಒತ್ತಾಯ; ಸ್ಪಷ್ಟನೆ ನೀಡಿದ NTA

Aug 28, 2021

ನವದೆಹಲಿ: ಈ ಬಾರಿಯ ನೀಟ್ ಪರೀಕ್ಷೆಯ ಪ್ಯಾಟರ್ನ್ ಬದಲಾಗಿರುವುದರಿಂದ ಎರಡೇ ತಿಂಗಳೊಳಗೆ ವಿದ್ಯಾರ್ಥಿಗಳಿಗೆ ತಯಾರಿ ನಡೆಸುವುದು ಕಷ್ಟವಾಗುತ್ತಿದೆ, ನೀಟ್ ಪರೀಕ್ಷೆಯ (NEET UG Exam 2021) ಆಸುಪಾಸಿನಲ್ಲೇ ಸಿಬಿಎಸ್​ಇ (CBSE), ಕರ್ನಾಟಕದ ಕಾಮೆಡ್​ಕೆ (CoMEDK Exam), ಒರಿಸ್ಸಾ ಜೆಇಇ (Odisha JEE), ಮಧ್ಯಪ್ರದೇಶದ 12ನೇ ತರಗತಿ ಪರೀಕ್ಷೆಗಳಿವೆ ಎಂಬ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಸೆ. 12ರಂದು ನಡೆಯಲಿರುವ ನೀಟ್ ಪರೀಕ್ಷೆಯನ್ನು ಅಕ್ಟೋಬರ್​ವರೆಗೆ ಮುಂದೂಡಬೇಕೆಂದು ಟ್ವಿಟ್ಟರ್​ನಲ್ಲಿ ಅಭಿಯಾನ ನಡೆಸಿದ್ದರು. ಅಲ್ಲದೆ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಪ್ರವಾಹ ಉಂಟಾಗಿರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿತ್ತು. ಆದರೆ, ನೀಟ್ ಪರೀಕ್ಷೆಯ ಮುಂದೂಡಿಕೆ ಬಗ್ಗೆ NTA ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ಖಚಿತಪಡಿಸಿದೆ.

ಈ ಬಾರಿ 16 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಮುಂದೂಡಿಕೆಗೆ ಒತ್ತಾಯಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ NTA ಡಿಜಿ ವಿನೀತ್ ಜೋಷಿ, ಸೆಪ್ಟೆಂಬರ್ 12ರಂದೇ ನೀಟ್ ಪರೀಕ್ಷೆ ನಡೆಯಲಿದೆ. ಈಗ ಇದ್ದಕ್ಕಿದ್ದಂತೆ ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ. ಸಿಬಿಎಸ್​ಇ ಮತ್ತು ನೀಟ್ ಪರೀಕ್ಷೆಯ ನಡುವೆ ಅಂತರ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂದಿದ್ದಾರೆ.

ಸೆ. 12ರಂದು ನೀಟ್ ಪರೀಕ್ಷೆ ನಡೆಯಲಿದ್ದು, ಬರೋಬ್ಬರಿ 16 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ನೀಟ್-2021ರ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಈಗಾಗಲೇ NTA ಬಿಡುಗಡೆ ಮಾಡಿದೆ. ನೀವೇನಾದರೂ ನೀಟ್ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರೆ ನಿಮ್ಮ ಪರೀಕ್ಷಾ ಕೇಂದ್ರದ (NEET Exam Centre) ಬಗ್ಗೆ ಮಾಹಿತಿ ಪಡೆಯಲು ನೀಟ್‌ನ ಅಧಿಕೃತ ವೆಬ್‌ಸೈಟ್ neet.nta.nic.inಗೆ ಭೇಟಿ ನೀಡಬಹುದು.

ಈ ಬಾರಿ ಇಂಗ್ಲಿಷ್, ಕನ್ನಡ, ಹಿಂದಿ, ಅಸ್ಸಾಮೀಸ್, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಈ 13 ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ನೀಟ್ ಪರೀಕ್ಷೆ ಪೇಪರ್ ಮತ್ತು ಪೆನ್​ ಮೋಡ್​ನಲ್ಲಿರಲಿದೆ. ನೀಟ್ ಪರೀಕ್ಷಾ ಕೇಂದ್ರಗಳ ಜೊತೆಗೆ ಮೆಡಿಕಲ್ ಪ್ರವೇಶ ಪರೀಕ್ಷೆಯ ಸ್ಯಾಂಪಲ್ ಓಎಂಆರ್ ಶೀಟ್ ಹಾಗೂ ಓಎಂಆರ್ ಶೀಟ್ ಅನ್ನು ಹೇಗೆ ಭರ್ತಿ ಮಾಡುವುದೆಂಬ ಮಾಹಿತಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಇದು ಕೂಡ ನೀಟ್ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ.

ಎಂಬಿಬಿಎಸ್. ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್​ಎಂಎಸ್ ಕೋರ್ಸ್​ಗಳ ಪ್ರವೇಶಾತಿಗೆ ನೀಟ್ ಪರೀಕ್ಷೆಯ ಫಲಿತಾಂಶವನ್ನು ಬಳಸಬಹುದು. ಭಾರತದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಸಮುದಾಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಬಾರಿ ಕುವೈತ್​ ಹಾಗೂ ದುಬೈನಲ್ಲಿ ಕೂಡ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಒಟ್ಟು 198 ಕೇಂದ್ರಗಳಲ್ಲಿ ಈ ಬಾರಿ ನೀಟ್ ಪರೀಕ್ಷೆಗಳು ನಡೆಯಲಿದೆ.

ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗಳಿಗೆ ನೀಟ್ ಪರೀಕ್ಷೆಯ ಮೂಲಕ ಸೇರಲಿಚ್ಛಿಸುವ ಅಭ್ಯರ್ಥಿಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಡಿಸೆಂಬರ್ 31ರ ವೇಳೆಗೆ ಕನಿಷ್ಠ 17 ವರ್ಷ ಪೂರ್ತಿಯಾಗಬೇಕು. ದೇಶದ ನಾನಾ ಕಾಲೇಜುಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಆ ಕಾಲೇಜು/ ವಿಶ್ವವಿದ್ಯಾಲಯ/ ಶಿಕ್ಷಣ ಸಂಸ್ಥೆಗಳಲ್ಲಿನ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಬಿಎಸ್​ಸಿ ನರ್ಸಿಂಗ್​ಗೆ ಸೇರಲಿಚ್ಛಿಸುವ ಅಭ್ಯರ್ಥಿಗಳು ಪಿಸಿಬಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಹಾಗೂ ಇಂಗ್ಲಿಷ್​ನಲ್ಲಿ ಶೇ. 45 ಅಂಕಗಳನ್ನಾದರೂ ಪಡೆದಿರಬೇಕು. ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದಿರಬೇಕು ಎಂದು ಶೈಕ್ಷಣಿಕ ಅರ್ಹತೆಯ ಬಗ್ಗೆ ಎನ್​ಟಿಎ ತಿಳಿಸಿದೆ.

ಹಾಗೇ, ಎಸ್​ಸಿ/ ಎಸ್​ಟಿ ಅಥವಾ ಒಬಿಸಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದು ಶೇ. 40ರಷ್ಟು ಅಂಕವನ್ನು ಗಳಿಸಿರಬೇಕು. ಜನರಲ್ ಕೆಟಗರಿಯವರಾದರೆ ಶೇ. 45ರಷ್ಟು ಅಂಕ ಪಡೆದಿರಬೇಕು. ಹಾಗೇ. ದಿವ್ಯಾಂಗರಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಅವರಿಗೂ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎನ್​ಟಿಎ ಮಾಹಿತಿ ನೀಡಿದೆ. ನೀಟ್ ಪರೀಕ್ಷೆಯ ಬಗ್ಗೆ ಮಾಹಿತಿಗಳು ಬೇಕಾಗಿದ್ದರೆ 011-40759000 ಸಂಖ್ಯೆಗೆ ಕರೆ ಮಾಡಬಹುದು.

Source:Tv9kannada