IPL 2021: Rcb ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಮೊದಲ ಪಂದ್ಯಕ್ಕೆ ಲಭ್ಯ

Sep 15, 2021

ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧಕ್ಕೆ ಸೆಪ್ಟೆಂಬರ್ 19 ರಿಂದ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಇನ್ನು ಸೆಪ್ಟೆಂಬರ್ 20 ರಂದು ಕೆಕೆಆರ್​ ವಿರುದ್ದದ ಪಂದ್ಯದ ಮೂಲಕ ಆರ್​ಸಿಬಿ ಅಭಿಯಾನವನ್ನು ಆರಂಭಿಸಲಿದೆ.

ಆದರೆ ಈ ಪಂದ್ಯಕ್ಕೆ ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಲಭ್ಯರಿರಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಯುಎಇನಲ್ಲಿ ಕೊರೋನಾ ಕ್ವಾರಂಟೈನ್​ ನಿಯಮ ಜಾರಿಯಲಿದ್ದು, ಹೀಗಾಗಿ ವಿದೇಶದಿಂದ ಬರುವ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕು.

ಅದರಂತೆ ಇಂಗ್ಲೆಂಡ್​ನಿಂದ ಆಗಮನಿಸಿದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕ್ವಾರಂಟೈನ್​ನಲ್ಲಿದ್ದಾರೆ. ಇವರ ಕ್ವಾರಂಟೈನ್​ ಅವಧಿ ಸೆಪ್ಟೆಂಬರ್ 17 ಕ್ಕೆ ಮುಕ್ತಾಯವಾಗಲಿದೆ. ಇನ್ನು ಸೆಪ್ಟೆಂಬರ್ 15 ರಂದು ಆಗಮಿಸಿರುವ ಚಮೀರಾ ಹಾಗೂ ಹಸರಂಗ 6 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದರೆ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು.

ಆದರೀಗ ಈ ಆಟಗಾರರಿಗೆ ಕೇವಲ 2 ದಿನಗಳ ಕ್ವಾರಂಟೈನ್ ಮಾತ್ರ ಇರಲಿದೆ ಎಂದು ತಿಳಿದು ಬಂದಿದೆ. ಬಯೋ ಬಬಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಆಡಿದ್ದರಿಂದ ಈ ಆಟಗಾರರಿಗೆ ಕ್ವಾರಂಟೈನ್​ನಲ್ಲಿ ವಿನಾಯಿತಿ ಸಿಗಲಿದೆ. ಅದರಂತೆ ಎರಡು ದಿನಗಳ ಕಾಲ ಮಾತ್ರ ಕ್ವಾರಂಟೈನ್ ಇರಲಿದ್ದು, ಸೆಪ್ಟೆಂಬರ್ 17 ಅಥವಾ 18 ಕ್ಕೆ ತಂಡವನ್ನು ಕೂಡಿಕೊಳ್ಳಬಹುದು.

ಇದರೊಂದಿಗೆ ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಸೆಪ್ಟೆಂಬರ್ 20 ರಂದು ನಡೆಯಲಿರುವ ಕೆಕೆಆರ್​ ವಿರುದ್ದದ ಮೊದಲ ಪಂದ್ಯಕ್ಕೆ ಲಭ್ಯರಿರುವುದು ಬಹುತೇಕ ಖಚಿತ. ಇನ್ನು ಬಹುತೇಕ ಆರ್​ಸಿಬಿ ಆಟಗಾರರು ಯುಎಇಗೆ ಬಂದಿಳಿದಿದ್ದು, ಅದರಂತೆ ಮೊದಲ ಪಂದ್ಯದ ವೇಳೆ ಎಲ್ಲರೂ ಪ್ಲೇಯಿಂಗ್ ಇಲೆವೆನ್​ ಆಯ್ಕೆಗೆ ಲಭ್ಯರಿರಲಿದ್ದಾರೆ.

Source:tv9kannada