IPL 2023: ‘ಇದು ಧೋನಿಯ ಕೊನೆಯ ಐಪಿಎಲ್’; ಖಚಿತ ಪಡಿಸಿದ ಮಾಜಿ ಸಿಎಸ್​ಕೆ ಆಟಗಾರ

Mar 11, 2023

 

Ms Dhoni: ಧೋನಿ ವಿದಾಯಕ್ಕಾಗಿ ಸಿಎಸ್​ಕೆ ಸರ್ವ ತಯಾರಿ ಮಾಡಿಕೊಂಡಿದ್ದು, ಮುಂಬರುವ ಆವೃತ್ತಿಯನ್ನು ಸಿಎಸ್​ಕೆ ಅದ್ಧೂರಿಯಾಗಿ ಆಚರಿಸಲಿದೆ ಎಂದಿದ್ದಾರೆ.

16ನೇ ಆವೃತ್ತಿಯ ಐಪಿಎಲ್ ಎಂಎಸ್ ಧೋನಿಗೆ ಕೊನೆಯ ಐಪಿಎಲ್ ಎಂತಲೇ ಹೇಳಲಾಗುತ್ತಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಈ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಇದೀಗ ಈ ಸುದ್ದಿಗೆ ಪುಷ್ಠಿ ಸಿಕ್ಕಿದ್ದು ಸಿಎಸ್​ಕೆ ತಂಡದ ಮಾಜಿ ಆಟಗಾರ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ
 
ಚೆನ್ನೈ ಪರ ಆರಂಭಿಕ ಮೂರು ಸೀಸನ್‌ಗಳನ್ನು ಆಡಿರುವ ಮ್ಯಾಥ್ಯೂ ಹೇಡನ್, ಇದು ಬಹುಶಃ ಧೋನಿಯ ಕೊನೆಯ ಸೀಸನ್ ಎಂದಿದ್ದಾರೆ. ಧೋನಿ ವಿದಾಯಕ್ಕಾಗಿ ಸಿಎಸ್​ಕೆ ಸರ್ವ ತಯಾರಿ ಮಾಡಿಕೊಂಡಿದ್ದು, ಮುಂಬರುವ ಆವೃತ್ತಿಯನ್ನು ಸಿಎಸ್​ಕೆ ಅದ್ಧೂರಿಯಾಗಿ ಆಚರಿಸಲಿದೆ. ಏಕೆಂದರೆ ತಂಡದ ನಾಯಕ ಎಂಎಸ್ ಧೋನಿ ಬಹುಶಃ ಫ್ರಾಂಚೈಸ್ ಆಧಾರಿತ ಟಿ20 ಲೀಗ್‌ನಲ್ಲಿ ಆಟಗಾರನಾಗಿ ಕೊನೆಯ ಬಾರಿಗೆ ಆಡಲಿದ್ದಾರೆ ಎಂದಿದ್ದಾರೆ
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಹೇಡನ್, ‘ನೋಡಿ, ಯಶಸ್ಸಿಗೆ ತನ್ನದೇ ಆದ ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಸಿಎಸ್‌ಕೆ ಯಶಸ್ವಿಯಾಗಿದೆ. ಎರಡು ವರ್ಷಗಳ ಕಾಲ ಟೂರ್ನಿಯಿಂದ ಹೊರಗುಳಿದಿರುವುದು ದುರದೃಷ್ಟಕರ ಆದರೆ ಆ ಬಳಿಕ ಮತ್ತೆ ಬಂದು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವಲ್ಲಿ ಚೆನ್ನೈ ಯಶಸ್ವಿಯಾಗಿದೆ. ತಂಡವನ್ನು ಹೇಗೆ ಕಟ್ಟಬೇಕು, ತಂಡವನ್ನು ಸುಧಾರಿಸುವ ಮತ್ತು ಸಂಪೂರ್ಣವಾಗಿ ವಿಭಿನ್ನವಾದ ನೋಟವನ್ನು ನೀಡುವ ಮಾರ್ಗ ಧೋನಿಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.
 
ಮುಂದುವರೆದು ಮಾತನಾಡಿದ ಹೇಡನ್, ‘ಎಂಎಸ್ ಧೋನಿಗೆ ಈ ವರ್ಷ ವಿಶೇಷವಾಗಿ ವಿಶೇಷವಾಗಿರುತ್ತದೆ. ಈ ಆವೃತ್ತಿಯನ್ನು ಧೋನಿ ಅದ್ಧೂರಿಯಾಗಿ ಆಚರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಈ ಆವೃತ್ತಿ ಧೋನಿ ಯುಗದ ಅಂತ್ಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
 
ಚೆಪಾಕ್ ಕ್ರೀಡಾಂಗಣದಲ್ಲಿ ಧೋನಿ ಐಪಿಎಲ್​ಗೆ ವಿದಾಯ ಹೇಳಲಿದ್ದು, ಇಡೀ ಕ್ರೀಡಾಂಗಣದಲ್ಲಿ ನಾವು ಹಳದಿ ಸೈನ್ಯವನ್ನು ಕಾಣಬಹುದು. ನಾಯಕ ಎಂಎಸ್ ಧೋನಿ ಖಂಡಿತವಾಗಿಯೂ ಕೊನೆಯ ಬಾರಿಗೆ ಚೆಪಾಕ್ ಸ್ಟೇಡಿಯಂನಲ್ಲಿ ತಮ್ಮ ಅಭಿಮಾನಿಗಳಿಗೆ ವಿದಾಯ ಹೇಳಲಿದ್ದಾರೆ. ಇದು ಮರೆಯಲಾಗದ ಕ್ಷಣಗಳಲ್ಲಿ ಒಂದಾಗಲಿದೆ. ಎಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಾರೆ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ ಎಂದು ಹೇಡನ್ ಹೇಳಿಕೊಂಡಿದ್ದಾರೆ.
 

 

 

 
Source: TV9KANNADA