R Dhruvanarayan: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ ನಿಧನ, ರಾಜಕೀಯ ಗಣ್ಯರಿಂದ ಸಂತಾಪ

Mar 11, 2023

 
 

ಧ್ರುವನಾರಾಯಣ ಅವರ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್​ಡಿ ಕುಮಾರಸ್ವಾಮಿ, ಸತೀಶ್ ಜಾರಕಿಹೊಳಿ, ಶಾಸಕ ಜಿ.ಟಿ.ದೇವೇಗೌಡ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ(61) (KPCC Working President R Dhruvanarayana) ಅವರಿಗೆ ಬೆಳಗ್ಗೆ 6.40ಕ್ಕೆ ಕಾರಿನಲ್ಲಿ ತೆರಳುವಾಗ ಹೃದಯಾಘಾತವಾಗಿದ್ದು ಮೈಸೂರಿನ ಡಿಆರ್​​ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ ಹಿನ್ನಲೆ ಕಾಂಗ್ರೆಸ್ ರಾಮನಗರ, ದಾವಣಗೆರೆ ಜಿಲ್ಲೆಯಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ. ಮತ್ತೊಂದೆಡೆ ಧ್ರುವನಾರಾಯಣ ಅವರ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್​ಡಿ ಕುಮಾರಸ್ವಾಮಿ, ಸತೀಶ್ ಜಾರಕಿಹೊಳಿ, ಶಾಸಕ ಜಿ.ಟಿ.ದೇವೇಗೌಡ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

ಧ್ರುವನಾರಾಯಣ ಅವರ ಸಾವಿಗೆ ಸಂತಾಪ ಸೂಚಿಸಿದ ಸಿಎಂ

ಧ್ರುವನಾರಾಯಣ ಅವರು ತುಂಬಾ ಕ್ರೀಯಾಶೀಲರಾಗಿರುತ್ತಿದ್ದರು. ಅವರು ಹೃದಯಘಾತದಿಂದ ನಿಧನ ಹೊಂದಿರುವುದು ಆಘಾತವಾಗಿದೆ. ಚಾಮರಾಜನಗರ ಭಾಗದಲ್ಲಿ ತುಂಬಾ ಚಟುವಟಿಕೆಯಿಂದ ಕೆಲಸ ಮಾಡಿಕೊಂಡಿದ್ರು. ಅವರಿಗೆ ಪೊಲೀಸ್ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನೆರವೇರಿಸಲಾಗುವುದು ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.

ನನ್ನ ತಮ್ಮನನ್ನೆ ಕಳೆದುಕೊಂಡಂತೆ ಆಗಿದೆ -ಗಳಗಳನೆ ಅತ್ತ ಡಿಕೆ ಶಿವಕುಮಾರ್

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ ನಿಧನದ ಸುದ್ದಿ ತಿಳಿದು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ. ನನ್ನ ತಮ್ಮನನ್ನೇ ಕಳೆದುಕೊಂಡಂತೆ ಆಗಿದೆ. ದೇವರು ಇದ್ದಾನೋ, ಇಲ್ಲವೋ ಅಂತ ಎನ್ನಿಸುತ್ತೆ. ಧ್ರುವನಾರಾಯಣ ನಿಧನ ನನಗಷ್ಟೇ ಅಲ್ಲ ಯಾರಿಗೂ ನಂಬಲಾಗ್ತಿಲ್ಲ. ಧ್ರುವನಾರಾಯಣ ನಿಧನ ಪಕ್ಷಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ನಷ್ಟ ಎಂದು ಕಣ್ಣೀರು ಹಾಕಿದರು.

ಆರ್. ಧ್ರುವನಾರಾಯಣ್ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

ಧ್ರುವನಾರಾಯಣ್ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ. ಅವರ ಆತ್ಮಕ್ಕೆ ಶಾಂತಿ‌ಕೋರುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

 

 
Source: TV9KANNADA