Belagavi Hindalga Central Jail: ಬೆಳಗಾವಿ ಹಿಂಡಲಗಾ ಜೈಲು -ಇಲ್ಲಿ ದುಡ್ಡಿಗೆ ಎಲ್ಲವೂ ಸಿಗುತ್ತೆ!
Belagavi: ಬೆಳಗಾವಿ ಹಿಂಡಲಗಾ ಜೈಲು ಹಣವಿರುವ ಕೈದಿಗಳ ಸ್ವರ್ಗವಾಗಿ ಮಾರ್ಪಡುತ್ತಿದೆಯಾ ಅನ್ನೋ ಅನುಮಾನ ಮೂಡುತ್ತಿದೆ. ಇಲ್ಲಿ ದುಡ್ಡು ಕೊಟ್ರೇ ಎಲ್ಲವೂ ಸಿಗುತ್ತೆ, ಪ್ರಶ್ನೆ ಮಾಡಿದ್ರೇ ಒದೆ ಬೀಳುತ್ತೆ ಅನ್ನೋದು ಮತ್ತೊಮ್ಮೆ ಜಗತ್ ಜಾಹಿರ್ ಆಗಿದೆ. ಹಣವಂತರಿಗೆ ಇರುವ ಡಿಮ್ಯಾಂಡ್ ಬಡ ಕೈದಿಗಳಿಗಿಲ್ಲ (Jail inmates), ಒಳ್ಳೆಯ ಊಟವನ್ನೂ ನೀಡಲ್ಲ, ಜೈಲು ಸಿಬ್ಬಂದಿಗಳ ವಿರುದ್ದ ಹೋದ್ರೇ ಬೇರೆ ಕೈದಿಗಳಿಂದ ಕೊಲೆ ಕೂಡ ನಡೆಯಬಹುದು ಅನ್ನೋದಕ್ಕೆ ನಾವ್ ಇವತ್ತು ಹೇಳ್ತಿರುವ ಸ್ಟೋರಿಯೇ ಸಾಕ್ಷಿ ಆಗಲಿದೆ. ಹಿಂಡಲಗಾ ಜೈಲು ಒಳಗಿನ ಕಹಾನಿಯನ್ನ ವಿಥ್ ವಿಡಿಯೋ ಸಮೇತ ಹೇಳ್ತೆವಿ ನೋಡಿ…(Belagavi Hindalga Central Jail)
ತನ್ನ ಮೇಲೆ ಜೈಲು ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಅಂತಾ ವಿವರಿಸುತ್ತಿರುವ ಕೈದಿ ಒಂದು ದೃಶ್ಯವಾದ್ರೇ ಊಟ ಯಾಕೆ ಸರಿ ಕೊಟ್ಟಿಲ್ಲಾ ಅಂತಾ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿ ಕೈದಿ ಇದ್ದ ಸೆಲ್ ನ್ನ ಚೆಲ್ಲಾಪೆಲ್ಲಿ ಮಾಡಿ ಊಟದಲ್ಲೂ ಕಸ ಹಾಕಿರುವ ದೃಶ್ಯ ಮತ್ತೊಂದು. ಇದು ಬೆಳಗಾವಿ ಹಿಂಡಲಗಾ ಜೈಲಿನ ಎಕ್ಸ್ ಕ್ಲೂಜಿವ್ ಇನ್ ಸೈಡ್ ವಿಡಿಯೋ. ಹೌದು ಈ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ಇದೇ ಜೈಲಿನಲ್ಲಿದ್ದಾಗ ವಿನಯ್ ಗೆ ರಾಜಾತಿಥ್ಯ ನೀಡಲಾಗುತ್ತಿದೆ ಅಂತಾ ಸುದ್ದಿ ಮಾಡಿ ಸಂಚಲನ ಸೃಷ್ಟಿಸಿದ್ದ ಟಿವಿ9 ಇದೀಗ ಜೈಲಿನಲ್ಲಿನೊಳಗಿನ ವಿಡಿಯೋ ಸಮೇತ ಹಿಂಡಲಗಾ ಜೈಲಿನ ಅಧಿಕಾರಿಗಳ ಮತ್ತೊಮ್ಮೆ ಮುಖವಾಡ ಕಳಚುತ್ತಿದೆ. ಜೈಲಿನಲ್ಲಿ ಮೊಬೈಲ್ ಬಳಸಬಾರದು ಅನ್ನೋ ನಿಯಮ ಇದ್ರೂ ಇಲ್ಲಿ ಪಾಲನೆ ಆಗ್ತಿಲ್ಲಾ ಅನ್ನೋದು ಆಗಾಗ ಸಾಭೀತಾಗುತ್ತಿದೆ. ಇದರ ನಡುವೆ ಕೈದಿಗಳಿಗೆ ಚಿತ್ರಹಿಂಸೆಯನ್ನ ಜೈಲು ಅಧಿಕಾರಿಗಳು ನೀಡ್ತಾ ಇರುವುದು ಬೆಳಕಿಗೆ ಬಂದಿದೆ.
ಹಿಂಡಲಗಾ ಜೈಲಿನಲ್ಲಿ ಅಂದಾದರ್ಬಾರ್…
ಹೌದು ಜೈಲು ಸಿಬ್ಬಂದಿಗಳನ್ನ ವಿರುದ್ದ ಕಟ್ಟಿಕೊಂಡ್ರೇ ಅಥವಾ ಜೈಲಿನಲ್ಲಿ ಅವ್ಯವಸ್ಥೆ ಪ್ರಶ್ನೆ ಮಾಡಿದ್ರೇ ಕೈದಿಗಳ ಮೇಲೆ ಹಲ್ಲೆ ಮಾಡ್ತಾರಂತೆ ಸಿಬ್ಬಂದಿ. ಇಷ್ಟೂ ಮೀರಿ ಸೈಲೆಂಟ್ ಆಗದಿದ್ರೇ ತಮಗೆ ಬೇಕಾದ ಕೈದಿಗಳನ್ನ ಛೂ ಬಿಟ್ಟು ಹಲ್ಲೆ ಮಾಡಿಸುತ್ತಾರಂತೆ. ಇದಕ್ಕೆ ಸಾಕ್ಷಿ ಎಂಬಂತೆ ಜು.29ರಂದು ಸೂರ್ಯಕುಮಾರ್ ಉರ್ಫ್ ಸುರೇಶ್ ನಾಗಲಿಂಗಯ್ಯ ಎಂಬುವವರ ಕೊಲೆಗೆ ಯತ್ನ ನಡೆಸಿರುವುದು. ಮಂಡ್ಯ ಮೂಲದ ಸುರೇಶ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಬಂದಿದ್ದು ಕೆಲ ದಿನಗಳಿಂದ ಊಟ ಸರಿಯಾಗಿ ಕೊಡ್ತಿಲ್ಲಾ ಅಂತಾ ಸಿಬ್ಬಂದಿ ಜತೆಗೆ ಜಗಳವಾಡಿದ್ದಾನೆ. ಇದನ್ನೇ ಮುಂದಿಟ್ಟುಕೊಂಡು ಆತನ ಸೆಲ್ ಗೆ ಬಂದು ತಪಾಸಣೆ ನೆಪದಲ್ಲಿ ಎಲ್ಲ ಸಾಮಾಗ್ರಿಗಳನ್ನ ಚೆಲ್ಲಾಪಿಲ್ಲಿ ಮಾಡಿ ಹಲ್ಲೆ ಮಾಡಿದ್ದರಂತೆ. ಇದಾದ ಬಳಿಕವೂ ಪ್ರಶ್ನೆ ಮಾಡಿದ್ದರಿಂದ ಶಂಕರ ಭಜಂತ್ರಿ ಎಂಬಾತ ಕೈದಿಯಿಂದ ಹಲ್ಲೆ ಮಾಡಿಸಿದ್ದಾರಂತೆ. ಸ್ಕ್ರೂಡ್ರೈವ್ ನಿಂದ ಎಲ್ಲೆಂದರಲ್ಲಿ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದು ಇದೀಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಿಂಡಲಗಾ ಜೈಲಿನ ಅಧಿಕಾರಿಗಳೇ ಕೈದಿಗಳಿಗೆ ಪೋನ್ ಸಪ್ಲೈ ಮಾಡ್ತಾರಂತೆ. ಅದಕ್ಕೆ ಅಂತಾ ಜೈಲಿನಿಂದ ನಮ್ಮ ಪ್ರತಿನಿಧಿಗೆ ಈ ನಂಬರ್ ಗಳಿಂದ ಕರೆ ಬಂದಿರುವುದೇ ಸಾಕ್ಷಿ 805…9106 ಮತ್ತು 7349…614. ಇನ್ನೂ ಜೈಲಿನಲ್ಲಿ ಕೀ ಪ್ಯಾಡ್ ಮೊಬೈಲ್ ಬೇಕಾದ್ರೇ ಕೈದಿಗಳು ಜೈಲು ಅಧಿಕಾರಿಗಳಿಗೆ ಹತ್ತು ಸಾವಿರ ನೀಡಬೇಕಂತೆ, ಆಂಡ್ರಾಯ್ಡ್ ಪೋನ್ ಸಿಗುತ್ತಂತೆ. ಇಲ್ಲಿ ಕೆಲವು ಹಣವಂತ ಕೈದಿಗಳು ಮನೆಯವರಿಂದ ಹಣ ತರಸಿಕೊಂಡು ಜೈಲು ಸಿಬ್ಬಂದಿಗೆ ನೀಡಿ ಮೊಬೈಲ್ ತೆಗೆದುಕೊಂಡು ಬಳಕೆ ಮಾಡ್ತಾರೆ. ಹೀಗೆ ಬಳಕೆಗೆ ತೆಗೆದುಕೊಂಡಿರುವ ಮೊಬೈಲ್ ನಲ್ಲೇ ವಿಡಿಯೋ ಮಾಡಿಕೊಂಡು ಕಳುಹಿಸಿದ್ದಾರೆ. ಇನ್ನೂ ಉತ್ತಮ ಸೆಲ್ ಬೇಕಾದ್ರೇ ಆ ಸೆಲ್ ನಲ್ಲಿ ಟಿವಿ ಸೇರಿದಂತೆ ಹೈಫೈ ಜೀವನ ಬೇಕಾದ್ರೇ ಅದಕ್ಕೂ ಸಪ್ರೇಟ್ ಆಗಿ ದುಡ್ಡು ಕೊಡಬೇಕಂತೆ ಕೈದಿಗಳು. ಹೀಗೆ ಹಿಂಡಲಗಾ ಜೈಲಿನಲ್ಲಿ ದುಡ್ಡಿನ ಆಟವನ್ನೇ ಆಡ್ತಿದ್ದಾರೆ ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳು. ಇದು ಕೈದಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು ಕೆಲವರು ದಯಾಮರಣಕ್ಕೂ ಸಜ್ಜಾಗಿದ್ದಾರೆ ಅನ್ನೋದು ದುರಂತವೇ ಸರಿ…