ಹೃದಯ ಗೆದ್ದ ರಹಾನೆ: ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ.. ಹಾಗಾಗಿ ಆ ಕೇಕ್ ಕತ್ತರಿಸಲಿಲ್ಲ..!
ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ. ನಾನು ಹಾಗೆ ಮಾಡಲು ಬಯಸುವುದಿಲ್ಲ. ನಾವು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರೂ ಸಹ ಅವರಿಗೆ ಗೌರವವನ್ನು ನೀಡುತ್ತೇವೆ.
ನಾಯಕನಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲಿಸಿಕೊಟ್ಟ, ಅಜಿಂಕ್ಯಾ ರಹಾನೆ, ಕಾಂಗರೂ ಕೇಕ್ ಕತ್ತರಿಸೋದಕ್ಕೆ ಹಿಂದೇಟು ಹಾಕಿದ್ರು. ರಹಾನೆಯ ಈ ನಡೆ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ಆದ್ರೀಗ ಎರಡು ವಾರಗಳ ಬಳಿಕ ರಹಾನೆ, ತಮ್ಮ ನಿರ್ಧಾರದ ಹಿಂದಿದ್ದ ಅಸಲಿ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ತವರಿಗೆ ಮರಳಿದ ಅಜಿಂಕ್ಯಾ ರಹಾನೆ ಪಡೆಗೆ ಅದ್ಧೂರಿಯಾಗಿ ವೆಲ್‌ಕಮ್ ನೀಡಲಾಗಿತ್ತು. ಹಂಗಾಮಿ ನಾಯಕನಾಗಿ ಚರಿತ್ರೆ ಸೃಷ್ಟಿಸಿದ ರಹಾನೆಗೆ, ಮುಂಬೈನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು. ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಮುಂಬೈ ಬೀದಿಗಳಲ್ಲಿ ಜಮಾಯಿಸಿ, ರಹಾನೆ ಬರುವ ದಾರಿಯುದ್ದಕ್ಕೂ ಹೂಮಳೆಗೈದು ವೆಲ್‌ಕಮ್ ಮಾಡಿದ್ರು.
ಕಾಂಗರೂ ಕೇಕ್ ಕತ್ತರಿಸಿ ಸಂಭ್ರಮಿಸಲು ಹೇಳಲಾಗಿತ್ತು..
ಇದೇ ವೇಳೆ ಅಜಿಂಕ್ಯಾ ರಹಾನೆಗೆ ಕಾಂಗರೂ ಕೇಕ್ ಕತ್ತರಿಸಿ ಸಂಭ್ರಮಿಸಲು ಹೇಳಲಾಗಿತ್ತು. ಆದ್ರೆ ಅಚ್ಚರಿ ಎನ್ನುವಂತೆ ರಹಾನೆ, ಕಾಂಗರೂ ಕೇಕ್ ಕತ್ತರಿಸಲು ನಿರಾಕರಿಸಿದ್ರು. ರಹಾನೆ ಈ ನಡೆ ಆವತ್ತು ಅಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ನಿಗೂಢವಾಗಿತ್ತು. ಆದ್ರೀಗ ರಹಾನೆ ಆವತ್ತು ತಾನ್ಯಾಕೆ ಕಾಂಗರೂ ಕೇಕ್ ಕತ್ತರಿಸಿಲ್ಲ ಅನ್ನೋ ಸಂಗತಿಯನ್ನ ಬಾಯ್ಬಿಟ್ಟಿದ್ದಾರೆ. ನಿಜ್ಕಕೂ ರಹಾನೆ ನೀಡಿದ ಹೇಳಿಕೆ, ಕೇವಲ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನಷ್ಟೇ ಅಲ್ಲ.. ಆಸ್ಟ್ರೇಲಿಯಾ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ.
ಬೇರೆ ರಾಷ್ಟ್ರಗಳ ಬಗ್ಗೆ ಗೌರವ ಹೊಂದಿರಬೇಕು..
ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ. ನಾನು ಹಾಗೆ ಮಾಡಲು ಬಯಸುವುದಿಲ್ಲ. ನಾವು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರೂ ಸಹ ಅವರಿಗೆ ಗೌರವವನ್ನು ನೀಡುತ್ತೇವೆ. ಅದೇ ಉತ್ತಮ ಬೆಳವಣಿಗೆ, ಬೇರೆ ರಾಷ್ಟ್ರಗಳ ಬಗ್ಗೆ ಗೌರವ ಹೊಂದಿರಬೇಕು. ಅದಕ್ಕಾಗಿಯೇ ನಾನು ಆ ಕೇಕ್ ಕತ್ತರಿಸದಿರಲು ತೀರ್ಮಾನಿಸಿದೆ.
– ಅಜಿಂಕ್ಯಾ ರಹಾನೆ, ಟೀಮ್ ಇಂಡಿಯಾ ಉಪನಾಯಕ
ರಹಾನೆಯ ಈ ಮಾತುಗಳು ನಿಜಕ್ಕೂ ಅರ್ಥಗರ್ಭಿತವಾಗಿದೆ. ಜನಾಂಗೀಯ ನಿಂದನೆ ಮಾಡಿದವರನ್ನ ಆಟದಲ್ಲೇ ಹುಟ್ಟಡಗಿಸಿಯಾಗಿದೆ. ಅಂತಹದ್ರಲ್ಲಿ ಕಾಂಗರೂ ಕೇಕ್ ಕತ್ತರಿಸಿ ಸಂಭ್ರಮಿಸೋದು ಕೀಳು ಮಟ್ಟದ ಅಭಿರುಚಿಯಾಗುತ್ತೆ. ಹಾಗೆ ಮಾಡಿದ್ರೆ ಅವರಿಗೂ ನಮಗೂ ವ್ಯತ್ಯಾಸವಿರೋದಿಲ್ಲ ಅನ್ನೋದು, ರಹಾನೆ ಅಭಿಪ್ರಾಯವಾಗಿದೆ.
Source: TV9kannada