ಮೈಸೂರು: ಜಂಬೂಸವಾರಿಯಲ್ಲಿ ಭಾಗವಹಿಸಲು ಕೊವಿಡ್ ವರದಿ ಕಡ್ಡಾಯ; ನೆಗೆಟಿವ್ ಇದ್ದರೆ ಮಾತ್ರ ಅರಮನೆ ಆವರಣಕ್ಕೆ ಎಂಟ್ರಿ

Oct 13, 2021

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ನಡುವೆ ಜಿಲ್ಲಾಡಳಿತವು ಕೊರೊನಾ ಮುನ್ನೆಚ್ಚರಿಕೆಗಳ ಕುರಿತು ಸೂಚನೆ ಹೊರಡಿಸಿದ್ದು, ಜಂಬೂಸವಾರಿಯಲ್ಲಿ ಭಾಗವಹಿಸುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯಗೊಳಿಸಿದೆ. ಕೊವಿಡ್ ಟೆಸ್ಟ್ ವರದಿ ನೆಗೆಟಿವ್ ಇದ್ದರೆ ಮಾತ್ರ ಅರಮನೆ ಆವರಣಕ್ಕೆ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾಡಳಿತವು ಕಟ್ಟುನಿಟ್ಟಾಗಿ ತಿಳಿಸಿದೆ. ವರದಿ ಇಲ್ಲದಿದ್ದರೆ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಕಲಾವಿದರು, ಅಧಿಕಾರಿಗಳು, ಸಿಬ್ಬಂದಿ ವರ್ಗ, ಮಾಧ್ಯಮ ಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಅಕ್ಟೋಬರ್ 15ರಂದು ಜಂಬೂಸವಾರಿ ನಡೆಯಲಿದೆ.

ಜಂಬೂಸವಾರಿ ಮೆರವಣಿಗೆಗೆ ಅಂತಿಮ ಹಂತದ ರಿಹರ್ಸಲ್:
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಅಂತಿಮ ಹಂತದ ರಿಹರ್ಸಲ್ ನಡೆಯಲಿದೆ. ಅರಮನೆಯ ಮುಂಭಾಗ ಅಂತಿಮ ಹಂತದ ರಿಹರ್ಸಲ್​ನಲ್ಲಿ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ದಸರಾ ಗಜಪಡೆ ಭಾಗಿಯಾಗಲಿದೆ. ಈ ವೇಳೆ ಅಶ್ವದಳ, ಸಶಸ್ತ್ರ ಮೀಸಲು ಪಡೆ, ಪೊಲೀಸ್ ಬ್ಯಾಂಡ್ ಕೂಡ ತಯಾರಿ ನಡೆಸಲಿವೆ.

ವಿಶೇಷ ವಿದ್ಯುತ್ ದೀಪಾಲಂಕಾರವನ್ನು 10 ದಿನ ವಿಸ್ತರಿಸಲು ಮನವಿ:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಹಾಕಲಾಗಿರುವ ವಿಶೇಷ ವಿದ್ಯುತ್ ದೀಪಾಲಂಕಾರವನ್ನು 10 ದಿನ ವಿಸ್ತರಿಸಲು ಮನವಿ ಮಾಡಲಾಗಿದೆ. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ, ಸಚಿವ ಎಸ್.ಟಿ.ಸೋಮಶೇಖರ್‌ಗೆ ಮನವಿ ಸಲ್ಲಿಸಲಾಗಿದೆ. ಅಕ್ಟೋಬರ್ 15ರವೆಗೆ ದೀಪಾಲಂಕಾರ ಇರಲಿದ್ದು, ಅದನ್ನು ಅಕಲ್ಟೋಬರ್ 25ರವರೆಗೆ ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ. ಇದರಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಣಯ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.

Source:tv9kannada