Tata Consultancy Services: 13 ಲಕ್ಷ ಕೋಟಿ ರೂಪಾಯಿ ಮುಟ್ಟಿದ ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ

Aug 17, 2021

ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (Information Technology) ಕಂಪೆನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಷೇರು ಬೆಲೆ ಮಂಗಳವಾರ (ಆಗಸ್ಟ್ 17, 2021) ಎತ್ತರಕ್ಕೆ ಏರಿ, ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿ ರೂಪಾಯಿಯ ದಾಖಲೆಯನ್ನು ಬರೆಯಿತು. ಇಂದಿನ ವಹಿವಾಟಿನಲ್ಲಿ ನಿಫ್ಟಿ ಐ.ಟಿ. ಸೂಚ್ಯಂಕವು ಶೇ 1ಕ್ಕಿಂತ ಹೆಚ್ಚಿನ ಏರಿಕೆ ಕಂಡಿತು. ಟೆಕ್​ ಮಹೀಂದ್ರಾ, ಕೊಫೋರ್ಜ್, ಟಿಸಿಎಸ್​, ಮೈಂಡ್​ಟ್ರೀ, ಎಂಫಸಿಸ್ ಷೇರುಗಳಲ್ಲಿ ಏರಿಕೆ ಕಂಡುಬಂತು. ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಭಾರತದಲ್ಲಿನ ಎರಡನೇ ಅತಿ ದೊಡ್ಡ ಕಂಪೆನಿಯಾದ ಟಿಸಿಎಸ್​ ಷೇರು ಶೇ 1ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿತು. ಮಂಗಳವಾರ ಆರಂಭದ ವಹಿವಾಟಿನಲ್ಲಿ ಬಿಎಸ್​ಇಯಲ್ಲಿ ಪ್ರತಿ ಷೇರಿಗೆ 3518 ರೂಪಾಯಿಗೆ ಹೆಚ್ಚಿತು. ಆ ಮೂಲಕ ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ 13.01 ಲಕ್ಷ ಕೋಟಿ ಆಯಿತು.

ಪ್ರಸಕ್ತ ಮಾರುಕಟ್ಟೆ ಏರಿಕೆ ಪರ್ವದಲ್ಲಿ ಐ.ಟಿ. ಪ್ರಮುಖ ಕಂಪೆನಿಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್ ಮುಂಚೂಣಿಯಲ್ಲಿವೆ. “ಹೂಡಿಕೆದಾರರಿಗೆ ಐ.ಟಿ. ವಲಯಗಳ ಮೇಲೆ ವಿಶ್ವಾಸವಿದೆ. ಈ ಸೆಗ್ಮೆಂಟ್​ಗೆ ಇದು ವಿಸ್ತರಣೆ ಅವಧಿ. ಮೂರರಿಂದ ನಾಲ್ಕು ವರ್ಷ ಇರಲಿದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. 2021ರ ಜೂನ್ ಕೊನೆಗೆ ಟಿಸಿಎಸ್​ ವರದಿ ಮಾಡಿದಂತೆ, ನಿವ್ವಳ ಲಾಭ ಶೇ 28.5ರಷ್ಟು ಹೆಚ್ಚಳವಾಗಿ 9008 ಕೋಟಿ ರೂಪಾಯಿ ಮುಟ್ಟಿತ್ತು. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 7008 ಕೋಟಿ ರೂಪಾಯಿ ಬಂದಿತ್ತು.

ಇನ್ನು ಕಾರ್ಯ ನಿರ್ವಹಣೆಯಿಂದ ಬಂದ ಆದಾಯ ಜೂನ್​ ತ್ರೈಮಾಸಿಕದಲ್ಲಿ ಶೇ 18.5ರಷ್ಟು ಏರಿಕೆ ಆಗಿ, ರೂ. 45,411 ಕೋಟಿಗೆ ಬೆಳವಣಿಗೆ ಆಯಿತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ 38,322 ಕೋಟಿ ರೂ. ಆದಾಯ ಬಂದಿತ್ತು. ಡಾಲರ್ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಶೇ 21.6ರಷ್ಟು ಹೆಚ್ಚಳವಾಗಿ, 6.15 ಬಿಲಿಯನ್ ಡಾಲರ್ ಮುಟ್ಟಿದೆ. ಅದಕ್ಕೆ ಪ್ರಮುಖವಾಗಿ ಸಹಾಯ ಮಾಡಿರುವುದು ಬ್ಯಾಂಕಿಂಗ್, ಫೈನಾನ್ಷಿಯಲ್ ಸೇವೆಗಳು ಮತ್ತು ಇನ್ಷೂರೆನ್ಸ್​ (BFSI) ಹಾಗೂ ರೀಟೇಲ್ ಗ್ರಾಹಕರು ನೀಡಿದ ಹೊಸ ಆರ್ಡರ್​ಗಳು.

ಕೊಟಕ್ ಇನ್​ಸ್ಟಿಟ್ಯೂಷನಲ್ ಈಕ್ವಿಟೀಸ್​ ವರದಿಯಂತೆ, ತಂತ್ರಜ್ಞಾನದ ಮೇಲೆ ಖರ್ಚು ಮಾಡುವ ಪ್ರಮಾಣವು ಮಧ್ಯಮಾವಧಿ ಹಾಗೂ ದೀರ್ಘಾವಧಿಯಲ್ಲಿ ಹೆಚ್ಚಾಗಿದೆ. ಸಾರ್ವಜನಿಕ ಕ್ಲೌಡ್ ಬಳಕೆ ಈಗಿನ್ನೂ ಆರಂಭದ ಹಂತದಲ್ಲಿದೆ. ಶೇ 15ರಿಂದ 20ರಷ್ಟು ಕೆಲಸದ ಒತ್ತಡ ಮಾತ್ರ ಸಾರ್ವಜನಿಕ ಕ್ಲೌಡ್​ಗೆ ಹೋಗಿದೆ. ಇದು ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಶೇ 60ರಿಂದ 70 ಮುಟ್ಟಬಹುದು. ಸಂಸ್ಥೆಗಳು ಡಿಜಿಟಲ್ ಬದಲಾವಣೆಗೆ ಅಣಿಯಾಗಿದ್ದು, ಇದು ಬಹುತೇಕರಿಗೆ ಬಹುವರ್ಷಗಳ ಪಯಣ. “ಬಹಳ ಬಿಗಿಯಾದ ಕಾರ್ಮಿಕ ಮಾರುಕಟ್ಟೆ ಸನ್ನಿವೇಶವು ಮಾರ್ಜಿನ್ ಪರ್ಫಾರ್ಮೆನ್ಸ್​ಗೆ ಹೊಡೆತ ನೀಡುತ್ತಿದೆ, ಬೆಳವಣಿಗೆ ದೃಷ್ಟಿಯು ಇನ್ನೂ ಹೆಚ್ಚಾಗುವಂತೆ ಕಾಣುತ್ತಿದೆ. ಆದ್ದರಿಂದ ಇನ್ಫೋಸಿಸ್, ಟೆಕ್​ ಮಹೀಂದ್ರಾ ಮತ್ತು ಟಿಸಿಎಸ್​ ಆಕರ್ಷಕ ಎನಿಸಿದೆ,” ಎಂದು ಈ ತಿಂಗಳ ವರದಿಯಲ್ಲಿ ತಿಳಿಸಲಾಗಿದೆ.

ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಭಾರತದ ಟಾಪ್ 10 ಕಂಪೆನಿಗಳ ವಿವರ ಹೀಗಿವೆ (ಆಗಸ್ಟ್ 17, 2021)
1. ರಿಲಯನ್ಸ್ ಇಂಡಸ್ಟ್ರೀಸ್
2. ಟಿಸಿಎಸ್
3. ಎಚ್​ಡಿಎಫ್​ಸಿ ಬ್ಯಾಂಕ್
4. ಇನ್ಫೋಸಿಸ್
5. ಹಿಂದೂಸ್ತಾನ್ ಯುನಿಲಿವರ್
6. ಎಚ್​ಡಿಎಫ್​ಸಿ
7. ಐಸಿಐಸಿಐ ಬ್ಯಾಂಕ್
8. ಬಜಾಜ್​ ಫೈನಾನ್ಸ್
9. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
10. ಕೊಟಕ್ ಮಹೀಂದ್ರಾ

ಮೊದಲನೇ ಸ್ಥಾನದಲ್ಲಿ ಇರುವ ರಿಲಯನ್ಸ್​ ಹಾಗೂ ಎರಡನೇ ಸ್ಥಾನದಲ್ಲಿ ಇರುವ ಟಿಸಿಎಸ್​ ಮಧ್ಯೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಅಂತರ ಇದೆ.

Source: tv9 Kannada