ಪುರಿಯ ಕಡಲತೀರದಲ್ಲಿ ಅರಳಿದ ವಿಷ್ಣುವರ್ಧನ್ ಮರುಳಿನ ಕಲಾಕೃತಿ

Sep 17, 2021

‘ವಿಷ್ಣುವರ್ಧನ್’ ಎಂಬ ಹೆಸರಿನಲ್ಲೇ ಒಂದು ಪವರ್ ಇದೆ. ಅವರ ಅಭಿಮಾನದ ಸೆಳತಕ್ಕೆ ಒಮ್ಮೆ ಒಳಗಾದರೆ ಜೀವನಪರ್ಯಂತ ಅದರೊಟ್ಟಿಗೆ ಸಾಗುತ್ತಾರೆ. ಹೀಗಾಗಿಯೇ ವಿಷ್ಣುವರ್ಧನ್ ಅವರಿಗೆ ಎಲ್ಲಾ ಸಿನಿಮಾ ರಂಗಗಳಲ್ಲಿಯೂ ಪ್ರತ್ಯೇಕವಾದ ಗೌರವ ಮತ್ತು ಅಭಿಮಾನ ಲಭಿಸಿದೆ. ಅಂಬರೀಶ್ ಕನ್ನಡದಲ್ಲಿ ವಿಷ್ಣು ಅವರ ಕುಚುಕು ಗೆಳೆಯ. ಇನ್ನೂ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ,ಕಮಲಹಾಸನ್ ತೆಲುಗಿನ ಚಿರಂಜೀವಿ, ಮಲಯಾಳಂ ಮಮ್ಮುಟ್ಟಿ, ಮೋಹನ್ ಲಾಲ್ ಹಿಂದಿಯ ಶತ್ರುಘ್ನ ಸಿನ್ಹಾ ಮುಂತಾದ ಹಿರಿಯ ಕಲಾವಿದರು ವಿಷ್ಣುವರ್ಧನ್ ಅವರಿಗೆ ಆತ್ಮೀಯರಾಗಿದ್ದರು.

“ಇನ್ನು ಸುದೀಪ್ ಅಂತಹ ನಟರು ತಮ್ಮ ಬದುಕಿಗೆ ಪ್ರೇರಕ ಶಕ್ತಿಯಾಗಿ ವಿಷ್ಣುವರ್ಧನ್ ಅವರನ್ನು ಆರಾಧಿಸುತ್ತಾರೆ. ಅಭಿಮಾನಿಗಳ ಪಾಲಿನ ‘ದಾದಾ’ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ಅಜರಾಮರ. ಹೀಗಾಗಿಯೇ ವಿಷ್ಣುವರ್ಧನ್ ಅವರ ಪ್ರತಿ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಬ್ಬದಂತೆ ಉಲ್ಲಾಸ ಸಡಗರ ಉತ್ಸಾಹದಿಂದ ಆರಾಧಿಸುತ್ತಾರೆ.

ಪುರಿಯ ಕಡಲತೀರದಲ್ಲಿ ವಿಷ್ಣುವರ್ಧನ್ ಮರಳು ಶಿಲ್ಪ ಅಂತಹ ಅಭಿಮಾನಿಗಳಲ್ಲಿ ಅಗ್ರಗಣ್ಯರು ವೀರಕಪುತ್ರ ಶ್ರೀನಿವಾಸ್ ಅವರು. ಅವರು ತಮ್ಮ ಬದುಕಿನ ಪ್ರತಿ ಯಶಸ್ಸಿನ ಹಿಂದೆ ಯಜಮಾನ್ರ ಆಶೀರ್ವಾದವಿದೆ ಎಂದೇ ಭಾವಿಸಿದವರು. ಇಂತಹ ಶ್ರೀನಿವಾಸ್ ಅವರು ಈ ಬಾರಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಹಿಂದಿಗಿಂತ ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ಅವರ ವಿಶೇಷ ಪ್ರಯತ್ನದ ಫಲವೇ ಪುರಿಯ ಕಡಲತೀರದಲ್ಲಿ ವಿಷ್ಣುವರ್ಧನ್ ಅವರ ಮರಳಿನ ಶಿಲ್ಪಕೃತಿ ಅನಾವರಣವಾಗಿದೆ. ‘ನ್ಯಾಷನಲ್ ಐಡಿಯಲ್ ಡೇ’ ಎಂಬ ಹೆಸರಿನಲ್ಲಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಅವರು ಮುಂದಾಗಿರುವ ವೀರಕಪುತ್ರ ಶ್ರೀನಿವಾಸ್ ಅವರು ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಡಾ. ವಿಷ್ಣುವರ್ಧನ್ ಮರುಳು ಶಿಲ್ಪದ ಬಗ್ಗೆ ಹಂಚಿಕೊಂಡಿರುವ ಮಾತುಗಳು ಹೀಗಿವೆ…

ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ. ಆ ಶಿಲ್ಪ ಕನ್ನಡದ ಮೇರುನಟರಾದ ಡಾ.ವಿಷ್ಣುವರ್ಧನ್ ಅವರದ್ದು. ರಾಜ್ಯದಾದ್ಯಂತ ಸಾವಿರಾರು ಅಭಿಮಾನಿಗಳು ಸಾವಿರಾರು ರೀತಿಯಲ್ಲಿ ಯಜಮಾನ್ರ 71ನೇ ಜಯಂತಿಯನ್ನು ಆಚರಿಸುತ್ತಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಈ ತರಹದ್ದೊಂದು ಕೆಲಸ ಮಾಡಿ ಖುಷಿಪಡುತ್ತಿದ್ದೇನೆ.

ಡಾ. ವಿಷ್ಣುವರ್ಧನ್ ಮರಳುಶಿಲ್ಪದ ವಿಶೇಷತೆ ಇಂದು ಅನಾವರಣಗೊಂಡ ಯಜಮಾನ್ರ ಈ ಮರಳುಶಿಲ್ಪ 6 ಅಡಿ ಎತ್ತರ ಮತ್ತು 15 ಅಡಿ ಅಗಲದ್ದಾಗಿದೆ. ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಮೂರು ದಿನಗಳ ಕಾಲ ಈ ಶಿಲ್ಪ ಕಡಲ ತೀರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರಲಿದೆ. ನಾಳೆ ಇಲ್ಲೇ ಪ್ರೆಸ್ಮೀಟ್ ಮಾಡುತ್ತಿದ್ದೇನೆ. ಒರಿಸ್ಸಾದ ಜನತೆಗೆ ಡಾ.ವಿಷ್ಣು ಅವರು ಯಾರು ಎಂಬುದನ್ನು ತಿಳಿಸಲಿದ್ದೇನೆ. ಎಷ್ಟಾದ್ರೂ ನಮ್ಮೆಜಮಾನ್ರು ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಅಲ್ವೇ.. ಕರ್ನಾಟಕದಾಚೆಗಿನ ಜನರೂ ತಿಳಿಯಲಿ ಬಿಡಿ ನಮ್ಮೆಜಮಾನ್ರ ಹಿರಿಮೆ ಗರಿಮೆಗಳನ್ನು’ ಅಂತ ತಮ್ಮ ಮನದಾಳದ ಮಾತುಗಳನ್ನು ಫಿಲ್ಮಿಬೀಟ್ ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್ ಅವರು. ಇಂತಹ ಸಾಹಸಕ್ಕೆ ಕೈಹಾಕಿದ ವೀರಕಪುತ್ರ ಶ್ರೀನಿವಾಸ್ ಅವರಿಗೆ ಅಭಿನಂದನೆಗಳು ಹೇಳುತ್ತಾ ಸಮಸ್ತ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಫಿಲ್ಮಿಬೀಟ್ ಕನ್ನಡ ವತಿಯಿಂದ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ.

Source:kannada.filmbeat