ತೆಲಂಗಾಣ ಮೂಲದ ವಿನಯ್‌ ರೆಡ್ಡಿ ಬರೆದ ಬೈಡೆನ್‌ ಭಾಷಣಕ್ಕೆ ವ್ಯಾಪಕ ಪ್ರಶಂಸೆ!

Jan 22, 2021

ವಾಷಿಂಗ್ಟನ್(ಜ.22)‌: ಪ್ರಮಾಣವಚನ ಸ್ವೀಕಾರದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಾಡಿದ ಭಾಷಣವನ್ನು ಬರೆದುಕೊಟ್ಟ ಭಾರತೀಯ ಮೂಲದ ವಿನಯ್‌ ರೆಡ್ಡಿ ಅವರ ಬರವಣಿಗೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ನಿಖರ ಮಾತು, ಸಂದಿಗ್ಧ ಸಂದರ್ಭದಲ್ಲಿ ಏಕತೆ ಮತ್ತು ಭರವಸೆಯ ಹುಟ್ಟಿಸುವ ಆಶಯ ಬೈಡೆನ್‌ ಅವರ ಭಾಷಣದಲ್ಲಿ ಇದ್ದವು.

ಬೈಡೆನ್‌ ಭಾಷಣ ಅತ್ಯಂತ ಸ್ಫೂರ್ತಿ ದಾಯಕ, ಶಾಂತಿ ಸಂದೇಶ ನೀಡುವ ಹಾಗೂ ಬಿರುಸಾದ ಪದಗಳಿಂದ ಕೂಡಿತ್ತು ಎಂದು ಖ್ಯಾತ ಇತಿಹಾಸಕಾರ ಮೈಕೆಲ್‌ ಬೆಶ್ಲೋಸ್‌ ಟ್ವೀಟ್‌ ಮಾಡಿದ್ದಾರೆ. ಅದೇ ರೀತಿ ‘ಜೋ ಬೈಡೆನ್‌ ಅವರು ಜಗತ್ತು ಈ ಕ್ಷಣ ಬಯಸಿದ್ದನ್ನೇ ತಮ್ಮ ಭಾಷಣದಲ್ಲಿ ಹೇಳಿದ್ದಾರೆ’ ಎಂದು ಟೈಮ್‌ ನಿಯತಕಾಲಿಕೆಯ ಅಂಕಣಕಾರ ಡೇವಿಡ್‌ ಫ್ರೆಂಚ್‌ ಟ್ವೀಟ್‌ ಮಾಡಿದ್ದಾರೆ. ಪತ್ರಕರ್ತ ಮೆಟ್‌ ಫುಲ್ಲರ್‌ ಟ್ವೀಟ್‌ ಮಾಡಿ, ಬೈಡನ್‌ ಅವರ ಭಾಷಣ ಗೌರವ, ನಂಬಿಕೆ, ಇತಿಹಾಸ, ಏಕತೆಯ ಸಂಕೇತವಾಗಿತ್ತು ಎಂದು ಹೇಳಿದ್ದಾರೆ.

ರೆಡ್ಡಿ ಅವರು ಬೈಡೆನ್‌ರ ಆಪ್ತ ಬಳಗದಲ್ಲಿದ್ದು, ಒಹಾಯೋದ ಡೈಟನ್‌ನಲ್ಲಿ ಹುಟ್ಟಿಬೆಳೆದವರು. ಬೈಡೆನ್‌ 2013ರಿಂದ 2017ರವರೆಗೆ ಅಮೆರಿಕ ಉಪಾಧ್ಯಕ್ಷರಾಗಿದ್ದಾಗಲೂ ರೆಡ್ಡಿ ಅವರು, ಬೈಡೆನ್‌ನ ಮುಖ್ಯ ಭಾಷಣ ಬರಹಗಾರರಾಗಿದ್ದರು.ಇತ್ತೀಚಿನ ಚುನಾವಣಾ ಪ್ರಚಾರದ ವೇಳೆಯೂ ಭಾಷಣ ಬರೆದುಕೊಟ್ಟಿದ್ದರು.

Source: Suvarna News