Michiyo Tsujimura: ಗ್ರೀನ್ ಟೀ ಕಂಡು ಹಿಡಿದ ಜಪಾನಿನ ಮಿಚಿಯೊ ಸುಜಿಮುರಾಗೆ ಗೂಗಲ್ ಡೂಡಲ್ ವಿಶೇಷ ಗೌರವ

Sep 17, 2021

ಗ್ರೀನ್ ಟೀ ಬಗೆಗೆ ಆಳವಾದ ಸಂಶೋಧನೆ ಮಾಡಿದ ಜಪಾನಿನ ರಸಾಯನಶಾಸ್ತ್ರಜ್ಞ ಮಿಚಿಯೊ ಸುಜಿಮುರಾ ಅವರ 133ನೇ ಜನ್ಮ ದಿನದ ಪ್ರಯುಕ್ತ ಗೂಗಲ್ ತನ್ನ ಡೂಡಲ್​ನಲ್ಲಿ ವಿಶೇಷ ಗೌರವ ಸಲ್ಲಿಸಿದೆ. ಮಿಚಿಯೊ ಸುಜಿಮುರಾರ ಹುಟ್ಟುಹಬ್ಬವನ್ನು ಆಚರಿಸುವ ಗೂಗಲ್ ಡೂಡಲ್ ಗ್ರೀನ್ ಟೀಯನ್ನು ಸಂಶೋಧನೆ ಮಾಡುತ್ತಿರುವ ಆನಿಮೇಟೆಡ್ ಚಿತ್ರದ ಮೂಲಕ ಆಚರಿಸುತ್ತಿದೆ.

ಚಿತ್ರದಲ್ಲಿ ನೋಡುವಂತೆ ಹಸಿರು ಸಸ್ಯ, ಒಂದು ಕಪ್ ಗ್ರೀನ್ ಟೀ, ಪೆನ್, ಫ್ಲಾಸ್ಕ್ ಮತ್ತು ನೋಟ್ ಪ್ಯಾಡ್​ನಂತಹ ವಿವಿಧ ಸಂಶೋಧನಾ ಘಟಕಗಳನ್ನು ಆನಿಮೇಟೆಡ್ ಚಿತ್ರ ಒಳಗೊಂಡಿದೆ. 1888 ಸೆಪ್ಟೆಂಬರ್ 17ರಂದು ಮಿಚಿಯೊ ಸುಜಿಮುರಾ ಜಪಾನ್​ನ ಸೈತಮಾ ಪ್ರಾಂತ್ಯದ ಒಕೆಗಾವಾ ನಗರದಲ್ಲಿ ಜನಿಸಿದರು. ಸುಜಿಮುರಾ ಅವರು ಶಾಲೆಯಲ್ಲಿದ್ದಾಗ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾ ಪದವಿ ಪಡೆದ ನತರ, ಹೆಣ್ಣು ಮಕ್ಕಳಿಗೆ ಶಿಕ್ಷಕಿಯಾಗಿ ಪಾಠ ಹೇಳಿಕೊಡುತ್ತಿದ್ದರು. ನಂತರ 1920ರ ಸಂದರ್ಭದಲ್ಲಿ ಹೊಕ್ಕೈಡೋ ಇಂಪೀರಿಯರ್ ವಿಶ್ವವಿದ್ಯಾಲಯಕ್ಕೆ ಸಂಬಳವಿಲ್ಲದೆ ಪ್ರಯೋಗಾಲಯದಲ್ಲಿ ಸಹಾಯಕರಾಗಿ ಕೆಲಸ ಪ್ರಾರಂಭಿಸಿದರು.

ನಂತರ 1922ರಲ್ಲಿ ಟೊಕಿಯೋ ಇಂಪೀರಿಯರ್ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡರು. 1923ರ ಸಮಯದಲ್ಲಿ ನಡೆದ ಭೀಕರ ಭೂಕಂಪದ ಪರಿಣಾಮ ಅವರು ಕೆಲಸ ನಿರ್ವಹಿಸುತ್ತಿದ್ದ ಪ್ರಯೋಗಾಲಯ ಹಾನಿಗೊಳಗಾಯಿತು. ಇವುಗಳಿಂದ ಸುಧಾರಿಸಿಕೊಂಡ ಬಳಿಕ ವಿಟಮಿನ್ ಬಿ1ಅನ್ನು ಕಂಡು ಹಿಡಿದ ವೈದ್ಯ ಡಾ. ಉಮೆಟಾರೊ ಸುಜುಕಿ ಅವರ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಪ್ರಯೋಗಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅವರ ಸಹೋದ್ಯೋಗಿ, ಹಸಿರು ಚಹ (ಗ್ರೀನ್​ ಟೀ) ವಿಟಮಿನ್ ಸಿ ನೈಸರ್ಗಿಕ ಮೂಲವೆಂದು ಕಂಡು ಹಿಡಿದರು. ಈ ಸಂಶೋಧನೆಯಲ್ಲಿ ಆಳವಾದ ಅಧ್ಯಯನಕ್ಕೆ ಮುಂದಾದ ಸುಜಿಮುರಾ 1932ರಲ್ಲಿ ಪ್ರಬಂಧವೊಂದನ್ನು ಪ್ರಕಟಿಸಿದರು. ಹೆಸರು, ‘ಹಸಿರು ಚಹಾದ ರಾಸಾಯನಿಕ ಘಟಕಗಳ ಮೇಲಿನ ಅಧ್ಯಯನ’.

ಈ ಸಂಶೋಧನೆಯಿಂದ ಅವರು ಜಪಾನಿನ ಮೊದಲ ಮಹಿಳಾ ಕೃಷಿ ವೈದ್ಯರಾದರು. ತನ್ನ ಸಂಶೋಧನಾ ವೃತ್ತಿಯನ್ನು ಪೂರ್ಣಗೊಳಿಸದ ಬಳಿಕ ಸುಜಿಮುರಾ ಒಚಾನೊಮಿಜು ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದರು. ಹಸಿರು ಚಹಾ ಕಂಡುಹಿಡಿದ ಸುಜಿಜಿರಾ ಅವರಿಗೆ 1956ರಲ್ಲಿ ಜಪಾನ್ ಕೃಷಿ ವಿಜ್ಞಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು 1969 ಜೂನ್ 1ನೇ ತಾರೀಕಿನಂದು ಕೊನೆಯುಸಿರೆಳೆದರು. ಇಂದಿಗೂ ಒಕೆಗಾವಾದಲ್ಲಿ ಮಿಚಿಯೊ ಸುಜಿಮುರಾ ಅವರ ನೆನಪಿಗೆ ಕಲ್ಲಿನ ಸ್ಮಾರಕವಿದೆ.

Source:tv9kannada