ಟೆಲಿಕಾಂ ಕಂಪನಿಗಳಿಗೆ 4 ವರ್ಷ ಮೋರಾಟೋರಿಯಂ ಘೋಷಣೆ: ವೊಡಾಫೋನ್ ಐಡಿಯಾಗೆ ತುಸು ನೆಮ್ಮದಿ
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬುಧವಾರ (ಸೆಪ್ಟೆಂಬರ್ 15) ಎರಡು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಟೆಲಿಕಾಂ ಕಂಪನಿಗಳಿಗೆ ಸಾಲ ಮರುಪಾವತಿಗೆ ಸಮಯಾವಕಾಶ ನೀಡಲು ಕೇಂದ್ರ ಸಂಪುಟ ನಿರ್ಧರಿಸಿದೆ. ಕೇಂದ್ರ ಸರ್ಕಾರದ ತೀರ್ಮಾನವನ್ನು ಇದೀಗ ಸುಪ್ರೀಂಕೋರ್ಟ್ಗೆ ತಿಳಿಸಿ, ಒಪ್ಪಿಗೆ ಪಡೆಯಬೇಕು. ಜೊತೆಗೆ ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ವಾಹನ ಉತ್ಪಾದನೆಗೆ ಉತ್ತೇಜನ ನೀಡಲು ಉತ್ಪಾದನೆ ಆಧರಿತ ಪೋತ್ಸಾಹಧನ ನೀಡುವ ಯೋಜನೆಗೂ ಒಪ್ಪಿಗೆ ನೀಡಲಾಗಿದೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ನಮ್ಮ ದೇಶದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಆರ್ಥಿಕ ನಷ್ಟದಲ್ಲಿವೆ. ವಿಶೇಷವಾಗಿ ವೋಡಾಪೋನ್ ಐಡಿಯಾ ಕಂಪನಿ ನಷ್ಟದ ಸುಳಿಗೆ ಸಿಲುಕಿದೆ. ಸುಪ್ರೀಂಕೋರ್ಟ್ ಆದೇಶ ನೀಡಿರುವಂತೆ ಕೇಂದ್ರ ಸರ್ಕಾರಕ್ಕೆ ನಿವ್ವಳ ಹೊಂದಾಣಿಕೆ ಆದಾಯ ಅರ್ಥಾತ್ ಎಜಿಆರ್ (ಅಡ್ಜಸ್ಟೆಡ್ ಗ್ರಾಸ್ ರೆವಿನ್ಯೂ) ಪಾವತಿಸಬೇಕಿದೆ. ಈ ಮೊತ್ತ ಸುಮಾರು ₹ 58,254 ಕೋಟಿ. ಪ್ರಸ್ತುತ ವೋಡಾಪೋನ್ ಐಡಿಯಾ ಕಂಪನಿ ₹ 1.9 ಲಕ್ಷ ಕೋಟಿ ನಷ್ಟ ಅನುಭವಿಸುತ್ತಿದೆ. ನಷ್ಟದಿಂದ ಹೊರಬರದೆ, ಸುಪ್ರೀಂಕೋರ್ಟ್ ಆದೇಶಿಸಿರುವ ಎಜಿಆರ್ ಪಾವತಿಸುವ ಸ್ಥಿತಿಯಲ್ಲಿ ವೋಡಾಪೋನ್ ಐಡಿಯಾ ಕಂಪನಿ ಇಲ್ಲ.
ಸದ್ಯದ ಸ್ಥಿತಿಯಲ್ಲಿ ಕಂಪನಿಯನ್ನು ಮುನ್ನಡೆಸುವುದೇ ಕುಮಾರ ಮಂಗಳಂ ಬಿರ್ಲಾ ಅವರಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಕಂಪನಿಯಲ್ಲಿ ತಾವು ಹೊಂದಿರುವ ಶೇ 27ರಷ್ಟು ಷೇರಿನ ಪಾಲನ್ನೇ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಕೇಂದ್ರ ಸರ್ಕಾರವೇ ಕಂಪನಿಯನ್ನು ಮುನ್ನಡೆಸಲಿ ಎಂದಿದ್ದರು. ಕೇಂದ್ರ ಕೋರಿಕೆಯನ್ನು ಮನ್ನಿಸಿರಲಿಲ್ಲ. ಕೊನೆಗೆ ಹಲವು ಸುತ್ತಿನ ಚರ್ಚೆ, ಮಾತುಕತೆ ಬಳಿಕ ಟೆಲಿಕಾಂ ಕಂಪನಿಗಳಿಗೆ ಪರಿಹಾರ ನೀಡುವ ಪ್ಯಾಕೇಜ್ ಸಿದ್ಧವಾಯಿತು. ಕಳೆದ ಬುಧವಾರ (ಸೆ.8) ನಡೆದ ಕ್ಯಾಬಿನೆಟ್ ಸಭೆಯಲ್ಲೇ ಈ ಪ್ಯಾಕೇಜ್ ಬಗ್ಗೆ ಚರ್ಚೆ ನಡೆದು ಒಪ್ಪಿಗೆ ನೀಡುವ ನಿರೀಕ್ಷೆ ಇತ್ತು. ಆದರೆ, ಕಳೆದ ವಾರದ ಕ್ಯಾಬಿನೆಟ್ ಸಭೆಯಲ್ಲಿ ಟೆಲಿಕಾಂ ಕಂಪನಿಗಳ ರಿಲೀಫ್ ಪ್ಯಾಕೇಜ್ ಬಗ್ಗೆ ಚರ್ಚೆಯಾಗಿರಲಿಲ್ಲ. ಅಂತಿಮವಾಗಿ ಇಂದು ಟೆಲಿಕಾಂ ಕಂಪನಿಗಳಿಗೆ ರಿಲೀಫ್ ನೀಡುವ ಪ್ಯಾಕೇಜ್ ಬಗ್ಗೆ ಚರ್ಚೆಯಾಗಿ ಕೇಂದ್ರದ ಕ್ಯಾಬಿನೆಟ್ ತನ್ನ ಒಪ್ಪಿಗೆ ನೀಡಿದೆ.
ಅಂತೂ ಇಂತೂ ದೇಶದ ಟೆಲಿಕಾಂ ಕಂಪನಿಗಳಿಗೆ ದೊಡ್ಡ ರಿಲೀಫ್ ನೀಡಲು ಕೇಂದ್ರದ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಇದರ ಪ್ರಕಾರ, ವೋಡಾಪೋನ್ ಐಡಿಯಾ ಸೇರಿದಂತೆ ಟೆಲಿಕಾಂ ಕಂಪನಿಗಳು ತಾವು ಪಾವತಿಸಬೇಕಾಗಿರುವ ಎಜಿಆರ್ಗೆ ನಾಲ್ಕು ವರ್ಷಗಳ ಮಾರಾಟೋರಿಯಂ ಅನ್ನು ನೀಡಲು ಕೇಂದ್ರದ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ಸವಲತ್ತು ದೊರೆತರೆ ಕೇಂದ್ರ ಸರ್ಕಾರಕ್ಕೆ ಪಾವತಿ ಮಾಡಬೇಕಾಗಿರುವ ಎಜಿಆರ್ ಹಣದ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶ ಸಿಗಲಿದೆ. ಹೀಗಾಗಿ ನಾಲ್ಕು ವರ್ಷಗಳವರೆಗೂ ವೋಡಾಪೋನ್ ಐಡಿಯಾ ಕಂಪನಿಗೆ ಎಜಿಆರ್ ಪಾವತಿಸುವುದರಿಂದ ತಾತ್ಕಾಲಿಕ ರೀಲೀಫ್ ಸಿಗಲಿದೆ.
ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಎಜಿಆರ್ ಪಾವತಿಗೆ 20 ವರ್ಷಗಳ ಮಾರಾಟೋರಿಯಂ ನೀಡಬೇಕು ಎನ್ನುವ ಚರ್ಚೆ ಕೂಡ ನಡೆದಿತ್ತು. ಆದರೆ, ಅಂತಿಮವಾಗಿ ಕೇಂದ್ರದ ಸಚಿವ ಸಂಪುಟ ಸಭೆಯು 4 ವರ್ಷಗಳ ಕಾಲ ಮಾತ್ರ ಎಜಿಆರ್ ಪಾವತಿಗೆ ಮಾರಾಟೋರಿಯಂ ಅವಕಾಶ ನೀಡಿದೆ.
ಕೇಂದ್ರ ಸರ್ಕಾರವು ಟೆಲಿಕಾಂ ಕಂಪನಿಗಳಿಗೆ ಮಾರಾಟೋರಿಯಂ ರಿಲೀಫ್ ಪ್ಯಾಕೇಜ್ ನೀಡದೇ ನೆರವಿಗೆ ಧಾವಿಸದೇ ಇದ್ದರೇ, ವೋಡಾಪೋನ್ ಐಡಿಯಾ ಕಂಪನಿ ಬಾಗಿಲು ಹಾಕಬೇಕಾಗುತ್ತಿತ್ತು. ಬಳಿಕ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್ಟೆಲ್, ಜಿಯೋ, ಬಿಎಸ್‌ಎನ್ಎಲ್ ಕಂಪನಿಗಳು ಮಾತ್ರ ಇರುತ್ತಿದ್ದವು. ಬಿಎಸ್‌ಎನ್‌ಎಲ್ ಹೆಚ್ಚಿನ ಜನಪ್ರಿಯತೆ ಗಳಿಸಿಲ್ಲ. ಹೀಗಾಗಿ ಟೆಲಿಕಾಂ ಸೇವೆಗೆ ಏರ್ಟೆಲ್, ಜಿಯೊ ಕಂಪನಿಗಳನ್ನು ಮಾತ್ರ ಜನರು ಅವಲಂಬಿಸಬೇಕಾಗಿತ್ತು. ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಹೆಚ್ಚಿನ ಸ್ಪರ್ಧೆ ಇರುವುದಿಲ್ಲ. ಭಾಗಶಃ ಏಕಸ್ವಾಮ್ಯದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಎರಡೇ ಕಂಪನಿಗಳು ಇರೋದು ಭವಿಷ್ಯದಲ್ಲಿ ಮಾರಕವಾಗಬಹುದು. ಹೀಗಾಗಿ ವೋಡಾಪೋನ್ ಐಡಿಯಾ ಕಂಪನಿಯು ಉಸಿರಾಡಲು ಅನುಕೂಲವಾಗುವಂತೆ ಕೇಂದ್ರದ ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ವೋಡಾಪೋನ್ ಐಡಿಯಾ ಮುಂದಿರುವ ಮಾರ್ಗಗಳೇನು?
ಮಾರಾಟೋರಿಯಂ ಸಿಕ್ಕಿರುವುದರಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ವೋಡಾಪೋನ್ ಐಡಿಯಾ ಸ್ವಲ್ಪಮಟ್ಟಿಗೆ ಉಸಿರಾಡಬಹುದು. ಆದರೆ, ನಾಲ್ಕು ವರ್ಷಗಳಲ್ಲಿ ತನ್ನ ಆದಾಯ ಹೆಚ್ಚಿಸಿಕೊಂಡು ಸಾಲ ತೀರಿಸಬೇಕು. ಜೊತೆಗೆ ಎಜಿಆರ್ ಪಾವತಿಗೆ ಬೇಕಾದ ₹ 58,254 ಕೋಟಿ ಹೊಂದಿಸಿಕೊಳ್ಳಬೇಕು.
ವೋಡಾಪೋನ್ ಐಡಿಯಾ ಕಂಪನಿಯ ಮುಂದೆ ಆದಾಯ ಹೆಚ್ಚಿಸಿಕೊಳ್ಳಲು ಕೆಲ ಮಾರ್ಗಗಳಿವೆ. ಮೊದಲನೆಯದಾಗಿ ಕಾಲ್, ಇಂಟರ್ನೆಟ್ ದರ ಹೆಚ್ಚಿಸಬಹುದು. ಆದರೆ ಸದ್ಯದ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಎರಡನೆಯ ಆಯ್ಕೆಯಾಗಿ ವೋಡಾಪೋನ್ ಕಂಪನಿಯು ಹೂಡಿಕೆದಾರರನ್ನು ಆಕರ್ಷಿಸಿ, ಬಂಡವಾಳ ಸಂಗ್ರಹಿಸಬಹುದು, ಈ ಮೂಲಕ ನಷ್ಟ ಸರಿದೂಗಿಸಿಕೊಳ್ಳುವ, ಎಜಿಆರ್ ಪಾವತಿಗೆ ಬೇಕಾದ ಹಣ ಸಂಗ್ರಹಿಸುವ ಮಾರ್ಗ ಹಿಡಿಯಬಹುದು. ₹ 1.9 ಲಕ್ಷ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಟೆಲಿಕಾಂ ಕಂಪನಿಗೆ ಬಂಡವಾಳ ಹೂಡಲು ಯಾರು ಮುಂದೆ ಬರುತ್ತಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ.
ಷೇರುಪೇಟೆಯಲ್ಲಿ ಹೆಚ್ಚಾಯ್ತು ಮೌಲ್ಯ
ಇಂದು ಷೇರುಪೇಟೆಯಲ್ಲಿ ಟೆಲಿಕಾಂ ಕಂಪನಿಗಳಿಗೆ ರಿಲೀಫ್ ನೀಡುವ ಪ್ಯಾಕೇಜ್ಗೆ ಒಪ್ಪಿಗೆ ಸಿಗುತ್ತೆ ಎನ್ನುವ ಸುದ್ದಿ ಬಾಂಬೆ ಷೇರುಪೇಟೆಯಲ್ಲಿ ಹೂಡಿಕೆದಾರರ ಸಕಾರಾತ್ಮಕ ಸ್ಪಂದನೆಗೆ ಕಾರಣ ಒದಗಿಸಿತು. ಟೆಲಿಕಾಂ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾದವು. ಭಾರ್ತಿ ಏರ್ಟೆಲ್ ಕಂಪನಿಯ ಷೇರು ಬೆಲೆಯು ಶೇ 3ರಷ್ಟು ಏರಿಕೆ ಕಂಡಿದ್ದು, ದಾಖಲೆಯ ₹ 719ಕ್ಕೆ ವಹಿವಾಟು ಆಗುತ್ತಿತ್ತು. ಕಳೆದೊಂದು ತಿಂಗಳಲ್ಲಿ ಭಾರ್ತಿ ಏರ್ಟೆಲ್ ಷೇರಿನ ಬೆಲೆ ಶೇ 13ರಷ್ಟು ಏರಿಕೆಯಾಗಿದೆ. ಎಂಟಿಎನ್ಎಲ್ ಷೇರು ಬೆಲೆಯು ಶೇ 2 ರಷ್ಟು ಏರಿಕೆ ಕಂಡಿತ್ತು. ರಿಲಯನ್ಸ್ ಕಮ್ಯೂನಿಕೇಷನ್ ಷೇರಿನ ಬೆಲೆ ಶೇ 1.6 ರಷ್ಟು ಏರಿಕೆ ಕಂಡಿತ್ತು. ವೋಡಾಪೋನ್ ಐಡಿಯಾ ಕಂಪನಿಯ ಷೇರಿನ ಬೆಲೆ ಶೇ 0.58 ರಷ್ಟು ಏರಿಕೆ ಕಂಡಿತ್ತು.
ಆಟೊಮೊಬೈಲ್ ಕ್ಷೇತ್ರಕ್ಕೆ ಪಿಎಲ್ಐ ಘೋಷಣೆ
ಕೇಂದ್ರ ಸಂಪುಟವು ಇಂದು ಆಟೊಮೊಬೈಲ್ ಕ್ಷೇತ್ರಕ್ಕೆ ಉತ್ಪಾದನೆ ಆಧರಿತ ಪೋತ್ಸಾಹಧನ ಯೋಜನೆ ಜಾರಿಗೆ ಒಪ್ಪಿಗೆ ನೀಡಿದೆ. ₹ 26 ಸಾವಿರ ಕೋಟಿ ಮೊತ್ತದ ಪೋತ್ಸಾಹಧನ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ವಾಹನ ಉತ್ಪಾದನೆಗೆ ಪೋತ್ಸಾಹಧನ ನೀಡಲಾಗುತ್ತೆ. ಈ ತೀರ್ಮಾನಕ್ಕೆ ಬಜಾಜ್ ಆಟೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಪ್ರತಿಕ್ರಿಯಿಸಿದ್ದು, ಭವಿಷ್ಯವನ್ನು ಇನ್ಸೆಂಟಿವ್ ಮೇಲೆ ನಿರ್ಮಾಣ ಮಾಡಲು ಆಗಲ್ಲ. ಬಜಾಜ್ ಕಂಪನಿಯ ತನ್ನ ಉತ್ಪಾದನೆಯ ಅರ್ಧದಷ್ಟು ವಾಹನಗಳನ್ನು ರಫ್ತು ಮಾಡುತ್ತಿದೆ. ಇದು ಕಂಪನಿಗಳಿಗೆ ರಫ್ತು ಹೆಚ್ಚಿಸಲು ಸಹಾಯ ಮಾಡುತ್ತೆ. ಈ ಮೊದಲು 57 ಸಾವಿರ ಕೋಟಿ ರೂಪಾಯಿ ಪ್ರೋತ್ಸಾಹಧನದ ಪ್ರಸ್ತಾವ ಇತ್ತು. ಈಗ 26 ಸಾವಿರ ಕೋಟಿ ರೂಪಾಯಿಗೆ ಇಳಿದಿದೆ ಎಂದು ಹೇಳಿದ್ದಾರೆ.
Source:tv9kannada