ಕಿಚ್ಚ ಸುದೀಪ್ ಮಾತಿದು: ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎಂದು ಹೇಳಿ
ಯಾವನಿಗಿದೆ ಕನ್ನಡವನ್ನ ಕಿತ್ತುಕೊಳ್ಳುವ ತಾಕತ್ತು, ಬರೋಕೆ ಹೇಳಿ. ಇಲ್ಲಿ ಬೇರೆ ಭಾಷೆ ಹೆಚ್ಚಾಗಿರುವುದಕ್ಕೆ ಕಾರಣ ನೀವೇ ಯೋಚಿಸಿ. ನೀವೇ ಯೋಚಿಸಿದ್ರೆ ಅರ್ಥ ಸಿಗಲಿದೆ ಎಂದು ರಾಮನಗರ ತಾಲೂಕಿನ ಬಿಡದಿಯಲ್ಲಿ ನಟ ಸುದೀಪ್ ಹೇಳಿದ್ದಾರೆ.
ರಾಮನಗರ: ಕನ್ನಡವನ್ನು ಉಳಿಸಿ ಎಂದು ಹೇಳ್ತೀರಾ, ಅದು ತಪ್ಪು. ಕನ್ನಡವನ್ನ ಕಿತ್ತುಕೊಂಡವರು ಯಾರು, ಯಾರಿಗಿದೆ ಆ ಧೈರ್ಯ. ಕನ್ನಡಕ್ಕೆ ಇರುವ ಇತಿಹಾಸ ಬೇರೆ ಯಾವ ಭಾಷೆಗೂ ಇಲ್ಲ ಎಂದು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಯಾವನಿಗಿದೆ ಕನ್ನಡವನ್ನ ಕಿತ್ತುಕೊಳ್ಳುವ ತಾಕತ್ತು, ಬರೋಕೆ ಹೇಳಿ. ಇಲ್ಲಿ ಬೇರೆ ಭಾಷೆ ಹೆಚ್ಚಾಗಿರುವುದಕ್ಕೆ ಕಾರಣ ನೀವೇ ಯೋಚಿಸಿ. ನೀವೇ ಯೋಚಿಸಿದ್ರೆ ಅರ್ಥ ಸಿಗಲಿದೆ ಎಂದು ರಾಮನಗರ ತಾಲೂಕಿನ ಬಿಡದಿಯಲ್ಲಿ ನಟ ಸುದೀಪ್ ಹೇಳಿದ್ದಾರೆ.
ಕನ್ನಡದ ಮೇಲೆ ಅಭಿಮಾನ ಇಲ್ಲಾಂದ್ರೆ, ಬಿಟ್ಟಾಕಿ ಅವರನ್ನು. ಅಭಿಮಾನ ಇರೋರನ್ನ ಗುರುತಿಸಿ ಬೆಳೆಸಿ. ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎಂದು ಹೇಳಿ ಎಂದು ಸುದೀಪ್ ತಿಳಿಸಿದ್ದಾರೆ. ಬುರ್ಜ್ ಖಲೀಫಾದಲ್ಲಿ ಕನ್ನಡದ ಬಾವುಟ ಪ್ರದರ್ಶನ ಹಿನ್ನೆಲೆ, ಕಿಚ್ಚ ಸುದೀಪ್‌ಗೆ ಕನ್ನಡಪರ ಹೋರಾಟಗಾರರಿಂದ ಸನ್ಮಾನ ಮಾಡಲಾಗಿದ್ದು, ಆ ಸಂದರ್ಭ ಸುದೀಪ್ ಮಾತನಾಡಿದ್ದಾರೆ.
ನಮ್ಮಲ್ಲಿ ಕನ್ನಡದ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಆದರೆ, ಕೆಲ ಕನ್ನಡಪರ ಸಂಘಟನೆಗಳಲ್ಲೇ ಗೊಂದಲವಿದೆ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡಿದ್ದಾರೆ. ನೀವು ಮೊದಲು ನಿಮ್ಮ ಗೊಂದಲಗಳನ್ನು ಸರಿಪಡಿಸಿಕೊಳ್ಳಿ. ಕನ್ನಡದ ಶಾಲು ಹಾಕಿ ಮನೆಗೆ ಬಂದರೆ ಖುಷಿ ಪಡಬೇಕಾ, ಇಲ್ಲ ಭಯ ಪಡಬೇಕಾ ಎಂದು ಗೊತ್ತಾಗಲ್ಲ ನನಗೆ ಎಂದು ಸುದೀಪ್ ಹೇಳಿದ್ದಾರೆ.
ನನಗೆ ಬೈಯಲು ಬಂದಿದ್ದೀರಾ, ಹೊಗಳಲು ಬಂದಿದ್ದೀರಾ, ಇದು ಸಹ ನನಗೆ ಗೊತ್ತಾಗುತ್ತಿಲ್ಲ. ಕನ್ನಡ ಮಾತಾಡಿದ್ರೂ ಬೈತೀರಾ, ಮಾತಾಡದಿದ್ರೂ ಬೈತೀರಾ. ನಮಗೆ ಬೇರೆ ಭಾಷೆಗಳ ಮೇಲೂ ಅಭಿಮಾನ ಇರಬೇಕು. ಬೇರೆಯವರು ನಮ್ಮ ಭಾಷೆ ಮಾತಾಡುವಾಗ ತುಸು ತಪ್ಪಾದರೆ ಗಲಾಟೆ ಆಗುತ್ತೆ. ಆಗ ನನಗೆ ಗೊಂದಲ ಆಗುತ್ತೆ ಎಂದು ಸುದೀಪ್ ತಿಳಿಸಿದ್ದಾರೆ.
ಸಂಘಟನೆಯವರ ಹಿಂದೆ ನೂರಾರು, ಸಾವಿರಾರು ಜನ ಬರ್ತೀರಿ. ಕಲಾವಿದರಿಗೆ ಅಭಿಮಾನಿಗಳಷ್ಟೇ ಇದ್ದಾರೆ, ಎಲ್ಲಾ ಕಡೆ ಇರ್ತಾರೆ. ಆದರೆ, ನೀವು ನಮ್ಮನ್ನ ಹೊಡೆಯಲು ಬಂದ್ರೆ ನಾವೊಬ್ಬರೇ ಸಿಗುತ್ತೇವೆ. ಕೆಲವರು ಏನಾದರೂ ಸ್ಟೆಪ್ ತೆಗೆದುಕೊಂಡಾಗ ಸ್ವಲ್ಪ ಯೋಚಿಸಿ ಎಂದು ನಟ ಸುದೀಪ್ ಹೇಳಿದ್ದಾರೆ.
Source: TV9Kannada