ಭಾರತೀಯರಿಂದ ಈಗ ಅಮೆರಿಕ ಆಳ್ವಿಕೆ: ಬೈಡೆನ್

Mar 6, 2021

ವಾಷಿಂಗ್ಟನ್(ಮಾ.06): ‘ಭಾರತೀಯ ಅಮೆರಿಕನ್ನರು ಅಮೆರಿಕದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಭಾರತೀಯ ಮೂಲದವರು ಅಮೆರಿಕದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಜೋ ಬೈಡೆನ್‌ ಅವರ ನಂತರದ ಹುದ್ದೆಯಾದ ಅಮೆರಿಕ ಉಪಾಧ್ಯಕ್ಷ ಹುದ್ದೆಯನ್ನು ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಲಂಕರಿಸಿದ್ದಾರೆ. ಇನ್ನು ಅಧ್ಯಕ್ಷರಾದ ನಂತರ 55 ಭಾರತೀಯ ಅಮೆರಿಕನ್ನರನ್ನು ಉನ್ನತ ಹುದ್ದೆಗಳಿಗೆ ಬೈಡೆನ್‌ ನೇಮಕ ಮಾಡಿದ್ದರು. ಈ ನಡುವೆ, ಇತ್ತೀಚೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’, ಮಂಗಳ ಗ್ರಹಕ್ಕೆ ರೋವರ್‌ ಕಳಿಸಿ ವಿಕ್ರಮ ಸಾಧಿಸಿತ್ತು. ಇದರಲ್ಲಿ ಬೆಂಗಳೂರು ಮೂಲದ ವಿಜ್ಞಾನಿ ಡಾ| ಸ್ವಾತಿ ಮೋಹನ್‌ ಪ್ರಮುಖ ಪಾತ್ರ ವಹಿಸಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ನಾಸಾ ವಿಜ್ಞಾನಿಗಳ ಜತೆ ಆನ್‌ಲೈನ್‌ನಲ್ಲಿ ಸಂವಾದ ನಡೆಸಿದ ಬೈಡೆನ್‌, ‘ಭಾರತೀಯ ಅಮೆರಿಕನ್ನರು ನಮ್ಮ ದೇಶದ ಜವಾಬ್ದಾರಿ ಹೊರುತ್ತಿದ್ದಾರೆ. ಡಾ| ಸ್ವಾತಿ ಮೋಹನ್‌ ಅವರೇ, ನನ್ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೇ, ನನ್ನ ಭಾಷಣ ಬರಹಗಾರ ವಿನಯ ರೆಡ್ಡಿ ಅವರೇ ಇದೋ ನಿಮಗೆ ಧನ್ಯವಾದಗಳು. ನೀವು ಅದ್ಭುತ’ ಎಂದು ಕೊಂಡಾಡಿದರು.

ಇದಕ್ಕೆ ಉತ್ತರಿಸಿದ ಡಾ| ಸ್ವಾತಿ ಮೋಹನ್‌, ನಾಸಾದಲ್ಲಿ ತಮ್ಮ ಅನುಭವಗಳನ್ನು ವಿವರಿಸಿ ಧನ್ಯವಾದ ಸಮರ್ಪಿಸಿದರು.

Source: Suvarna News