Video: ಮಹಿಳಾ ರಾಜಕಾರಣಿಗಳ ಬಗ್ಗೆ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಸಿಕ್ಕಾಪಟೆ ನಕ್ಕ ತಾಲಿಬಾನ್ ಉಗ್ರರು; ಕ್ಯಾಮರಾ ಆಫ್ ಮಾಡಿಸಿದರು !
ತಾಲಿಬಾನ್ ಉಗ್ರರಿಗೆ ಸಂಬಂಧಪಟ್ಟ ಮತ್ತು ಅಫ್ಘಾನಿಸ್ತಾನ(Afghanistan)ದ ಚಿತ್ರಣವನ್ನು ಕಟ್ಟಿಕೊಡುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ವೈರಲ್ ಆಗುತ್ತಿವೆ. ಹಾಗೇ, ಈಗ ಪತ್ರಕರ್ತೆಯೊಬ್ಬಳು ತಾಲಿಬಾನ್ ಉಗ್ರ (Taliban Terrorists)ರೊಂದಿಗೆ ಸಂವಾದ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೂವರು ತಾಲಿಬಾನ್ ಉಗ್ರರನ್ನು ಪತ್ರಕರ್ತೆಯೊಬ್ಬಳು ಸಂದರ್ಶನ ಮಾಡುವ ವಿಡಿಯೋ ಇದು.
ಆ ಪತ್ರಕರ್ತೆ ತಾಲಿಬಾನ್ ಉಗ್ರರ ಬಳಿ, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದಾರೆ. ಈಗ ನಿಮ್ಮ ಆಡಳಿತ ಶುರುವಾಗಿದೆ. ನಿಮ್ಮ ಆಡಳಿತದಲ್ಲಿ, ಅಪ್ಘಾನಿಸ್ತಾನ ಮಹಿಳೆಯರ ಹಕ್ಕುಗಳನ್ನು ಗೌರವಿಸಲಾಗುತ್ತದೆಯೇ ಎಂದು ಮೊದಲು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ತಾಲಿಬಾನ್ ಉಗ್ರ, ಹೌದು..ಇಸ್ಲಾಮಿಕ್ ಕಾನೂನಿನ (ಶರಿಯಾ) ಪ್ರಕಾರ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿದು, ಅದನ್ನು ಗೌರವಿಸುತ್ತೇವೆ ಎಂದು ಉತ್ತರಿಸುತ್ತಾನೆ. ಆಗ ಮುಂದುವರಿದ ಪತ್ರಕರ್ತೆ, ಮಹಿಳಾ ರಾಜಕಾರಣಿಗಳೂ ಸ್ಪರ್ಧಿಸಲು ಅವಕಾಶ ಇರುವ ಪ್ರಜಾಪ್ರಭುತ್ವ ಸರ್ಕಾರವನ್ನು ನೀವು ಒಪ್ಪಿಕೊಳ್ಳುತ್ತೀರಾ? ಮಹಿಳೆಯರು ಚುನಾವಣೆಗೆ ನಿಂತರೆ ಮತ ಹಾಕಲು ನಿಮ್ಮ ಆಡಳಿತದಲ್ಲಿ ಅವಕಾಶ ಇದೆಯಾ ಎಂದು ಕೇಳುತ್ತಾಳೆ.
ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬುದು ಎಲ್ಲರೂ ನೋಡಿದ್ದಾರೆ. ಇದೀಗ ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದ್ದರಿಂದ ಅತ್ಯಂತ ಹೆಚ್ಚು ಕಷ್ಟಪಡುವವರು ಮಹಿಳೆಯರೇ. ಹೀಗಾಗಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ, ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕು ರಕ್ಷಣೆಗೆ ಸಂಬಂಧ ಮೀಸಲಾತಿ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಕಾಬೂಲ್ನಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿದ ತಾಲಿಬಾನಿಗಳು, ನಾವೀಗ ಬದಲಾಗಿದ್ದೇವೆ. ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂದಿದ್ದಾರೆ.
Source: tv9 Kannada