ಕರ್ನಾಟಕ ಸಂಪೂರ್ಣ ಲಾಕ್​ಡೌನ್? ಅಧಿಕೃತ ಘೋಷಣೆಯೊಂದೇ ಬಾಕಿ

May 7, 2021

ಲಾಕ್​ಡೌನ್​ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದು, ಬಹುತೇಕ 15 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಕರ್ನಾಟದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಲಾಕ್​ಡೌನ್​ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದು, ಬಹುತೇಕ 15 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಸಾವು-ನೋವುಗಳನ್ನು ತಡೆಗಟ್ಟಬೇಕೆಂದರೆ ಲಾಕ್​ಡೌನ್​ ಮಾಡಲೇಬೇಕೆಂದು ತಜ್ಞರು ಕೂಡಾ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದು, ಇಂದು ಬೆಳಗ್ಗೆ ನಿಯಮ ಪಾಲನೆ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿಗಳು ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು.

ಇದೀಗ ಸರ್ಕಾರದ ಉನ್ನತ ಮೂಲಗಳು ಬಿಟ್ಟುಕೊಟ್ಟಿರುವ ಮಾಹಿತಿ ಪ್ರಕಾರ ಸೋಮವಾರದಿಂದ 15 ದಿನಗಳ ಕಾಲ ಕರ್ನಾಟಕದಲ್ಲಿ ಸಂಪೂರ್ಣ ಲಾಕ್​ಡೌನ್​ ಘೋಷಿಸುವ ಸಾಧ್ಯತೆ ಇದ್ದು, ಬಹುತೇಕ ಇಂದೇ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಮೇ 10ರಿಂದ 15 ದಿನಗಳ ಕಾಲ ರಾಜ್ಯದಲ್ಲಿ ಲಾಕ್‌ಡೌನ್ ಮಾಡಿದರೆ ಅದಕ್ಕೆ ಬೇಕಾದ ಪ್ಯಾಕೇಜ್, ನೆರವು ನೀಡುವ ಬಗ್ಗೆ ಹಂತ ಹಂತವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂಬುದನ್ನೂ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಎರಡೂ ಏರುಗತಿಯಲ್ಲೇ ಸಾಗುತ್ತಿರುವುದರಿಂದ ಇಷ್ಟು ದಿನ ಲಾಕ್​ಡೌನ್​ ಬಗ್ಗೆ ಒಲವು ಹೊಂದಿರದಿದ್ದ ರಾಜ್ಯ ಸರ್ಕಾರ ಈಗ ಅನಿವಾರ್ಯವಾಗಿ ಆ ನಿರ್ಧಾರಕ್ಕೆ ಕೈ ಹಾಕಬೇಕಾಗಿದೆ.

Source: TV9 Kannada