Puneeth Rajkumar: ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನ; ಕರ್ನಾಟಕದ ಪಾಲಿಗೆ ಕರಾಳ ಶುಕ್ರವಾರ

Oct 29, 2021

ಸ್ಯಾಂಡಲ್​ವುಡ್​ ಪಾಲಿಗೆ ಶುಕ್ರವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಅನಾರೋಗ್ಯ ಕಾರಣದಿಂದ ಇಂದು (ಅಕ್ಟೋಬರ್​ 29) ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್​ ರಾಜ್​ಕುಮಾರ್​ ಅಲ್ಲಿಯೆ ಮೃತಪಟ್ಟಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಈ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಏಕಾಏಕಿ ಪುನೀತ್​ ರಾಜ್​ಕುಮಾರ್​ ಅವರು ಮೃತಪಟ್ಟಿರುವುದು ಸ್ಯಾಂಡಲ್​ವುಡ್​ ಪಾಲಿಗೆ ನಿಜಕ್ಕೂ ಶಾಕ್​ ಆಗಿದೆ.

ಶುಕ್ರವಾರ ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್​​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಆಸ್ಪತ್ರೆಯಿಂದ ಹೊರಬರಲೆ ಇಲ್ಲ.

ಚಿಕ್ಕ ವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪುನೀತ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಸೋಶಿಯಲ್ ಮೀಡಿಯಾ ಮೂಲಕ ಪ್ರಾರ್ಥಿಸಿದ್ದರು. ಆದರೆ, ಈ ಪ್ರಾರ್ಥನೆ ಕೊನೆಗೂ ಇಡೇರಲೇ ಇಲ್ಲ.

‘ಇವತ್ತು ಬೆಳಗ್ಗೆ 11:30ಕ್ಕೆ ಚೆಸ್ಟ್​ ಪೆನ್​ ಆಗಿ ಇಲ್ಲಿ ಬಂದಿದ್ದಾರೆ. ಬರುವಾಗ ಸ್ವಲ್ಪ ಸೀರಿಯಸ್​ ಆಗಿತ್ತು. ಗಂಭೀರ ಹೃದಯಾಘಾತವಾಗಿದೆ. ಇನ್ನೂ, ಆರೋಗ್ಯ ಗಂಭೀರವಾಗಿದೆ. ಏನನ್ನೂ ಹೇಳೋಕೆ ಆಗಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ’ ಎಂದು ವೈದ್ಯರು ತಿಳಿಸಿದ್ದರು.

Source: tv9kannada