New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್
Cyclone Gabrielle: ನ್ಯೂಜಿಲೆಂಡ್ನಲ್ಲಿ ಅಪ್ಪಳಿಸಿರುವ ಗೇಬ್ರಿಯೆಲ್ ಚಂಡಮಾರುತದಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಐದಾರು ಜಿಲ್ಲೆಗಳಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಮಾಡಲಾಗಿದೆ.
ಆಕ್ಲೆಂಡ್: ನ್ಯೂಜಿಲೆಂಡ್ ದೇಶದಲ್ಲಿ ಗೇಬ್ರಿಯೆಲ್ ಚಂಡಮಾರುತದ (Gabrielle Cyclone) ಆರ್ಭಟ ನಡೆದಿದ್ದು, ದೇಶದ ಹಲವು ಭಾಗಗಳಿಗೆ ಹಾನಿಯಾಗಿದೆ. ವಿದ್ಯುತ್ ಗ್ರಿಡ್ ವ್ಯವಸ್ಥೆ ಹಾಳಾಗಿದ್ದು ಲಕ್ಷಾಂತರ ಮನೆಗಳು ಕತ್ತಲಲ್ಲಿ ಮುಳುಗಿವೆ. ಹಲವು ಭಾಗಗಳಿಗೆ ಅಲ್ಲಿನ ಕೇಂದ್ರ ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿ (National Emergency) ಘೋಷಣೆ ಮಾಡಿದೆ. ನ್ಯೂಜಿಲೆಂಡ್ನ ಉತ್ತರ ಭಾಗದ ಪ್ರದೇಶಗಳಿಗೆ ಗೇಬ್ರಿಯೇಲ್ ಚಂಡಮಾರುತದಿಂದ ಅತಿಹೆಚ್ಚು ಹಾನಿಯಾಗಿದೆ. ಅದರಲ್ಲೂ ಆಕ್ಲೆಂಡ್, ನಾರ್ತ್ಲ್ಯಾಂಡ್, ಕೋರೋಮಂಡೆಲ್, ಗಿಸ್ಬೋರ್ನ್, ಟೈರಾವಿಟಿ, ಹಾಕ್ಸ್ ಬೇ ಮೊದಲಾದ ಕಡೆ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಶ್ಚಿಮ ಆಕ್ಲೆಂಡ್ ಮತ್ತು ನಾರ್ತ್ಲ್ಯಾಂಡ್ನಲ್ಲಿ ಪ್ರವಾಹ ಮತ್ತು ಭೂಕುಸಿತ ಘಟನೆಗಳು ಬಹಳ ವರದಿಯಾಗಿವೆ. ಆದರೆ, ಗಿಸ್ಬೋರ್ನ್, ಕೋರೋಮಂಡೆಲ್, ಹಾಕ್ಸ್ ಬೇ ಪ್ರದೇಶಗಳು ಸಂಪೂರ್ಣ ಕಟ್ ಆಫ್ ಆಗಿವೆ. ಅಲ್ಲಿನ ದೂರಸಂಪರ್ಕ ವ್ಯವಸ್ಥೆಯೇ ನಿಂತುಹೋಗಿದೆ. ದಿ ಗಾರ್ಡಿಯನ್ ಪತ್ರಿಕೆಯ ವರದಿ ಪ್ರಕಾರ ಅಲ್ಲಿ ಎಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.
ಒಂದೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ಕತ್ತಲಲ್ಲಿ
ಗಾರ್ಡಿಯನ್ ವರದಿ ಪ್ರಕಾರ ಗೇಬ್ರಿಯೆಲ್ ಚಂಡಮಾರುತದ ಪರಿಣಾಮ ನ್ಯೂಜಿಲೆಂಡ್ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ನಾರ್ತ್ಲ್ಯಾಂಡ್, ಆಕ್ಲೆಂಡ್ ಮತ್ತು ಹಾಕ್ಸ್ಬೇ ಪ್ರದೇಶಗಳಿಂದ ಬಂದಿರುವ ಮಾಹಿತಿ. ಚಂಡಮಾರುತದಿಂದ ಬಹಳ ಹಾನಿಗೊಂಡಿರುವ ಗಿಸ್ಬೋರ್ನ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ ಎಂಬ ಪ್ರದೇಶಗಳಲ್ಲಿ ವಿದ್ಯುತ್ ಗ್ರಿಡ್ ಕಾರ್ಯನಿರ್ವಹಣೆ ಎಷ್ಟು ಸ್ಥಗಿತಗೊಂಡಿದೆ, ಎಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ತಪ್ಪಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ, ವಿದ್ಯುತ್ ಸಂಪರ್ಕ ಕಳೆದುಕೊಂಡು ಕತ್ತಲಲ್ಲಿ ಮುಳುಗಿರುವ ಮನೆಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು. ನ್ಯೂಜಿಲೆಂಡ್ನಲ್ಲಿ ಒಟ್ಟಾರೆ ಜನಸಂಖ್ಯೆ ಇರುವುದೇ ಸುಮಾರು 50 ಲಕ್ಷ. ಚಂಡಮಾರುತ ಅಪ್ಪಳಿಸಿರುವ ಬಹುತೇಕ ಪ್ರದೇಶಗಳು ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿರುವ ಅಂದಾಜು ಇದೆ. ಈಗ ಬಂದಿರುವ ಮಾಹಿತಿ ಪ್ರಕಾರ ವಿದ್ಯುತ್ ಸರಬರಾಜು ಮರಳಿ ಬರಲು ಹಲವು ದಿನಗಳು ಅಥವಾ ಕೆಲ ವಾರಗಳೇ ಆಗಬಹುದು.
ತುರ್ತುಸ್ಥಿತಿ ಘೋಷಣೆ
ನ್ಯೂಜಿಲೆಂಡ್ನಲ್ಲಿ ಗೇಬ್ರಿಯೆಲ್ ಚಂಡಮಾರು ಅಪ್ಪಳಿಸಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಾಷ್ಟ್ರೀಯ ತುರ್ತುಸ್ಥಿತಿಯನ್ನು ಅಲ್ಲಿನ ಸರ್ಕಾರ ಘೋಷಿಸಿದೆ. ನಾರ್ತ್ಲೆಂಡ್, ಆಕ್ಲೆಂಡ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ, ವೈಕಾಟೋ, ಹಾಕ್ಸ್ಬೇ ಮತ್ತು ಟರರುವಾ ಪ್ರದೇಶಗಳಲ್ಲಿ ತುರ್ತುಸ್ಥಿತಿ ಎಂದು ಘೋಷಿಸಲಾಗಿದೆ.
ತುರ್ತುಸ್ಥಿತಿ ಎಂದು ಘೋಷಣೆ ಆದರೆ ಪರಿಹಾರ, ರಕ್ಷಣಾ ಕಾರ್ಯಗಳ ಜವಾಬ್ದಾರಿಯನ್ನು ಸ್ಥಳೀಯ ಆಡಳಿತದ ಬದಲು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳುತ್ತಿದೆ. ಸರ್ಕಾರದಿಂದ ಕ್ಷಿಪ್ರವಾಗಿ ಹಣಕಾಸು ಸಂಪನ್ಮೂಲಗಳ ವ್ಯವಸ್ಥೆ ಆಗುತ್ತದೆ. ರಕ್ಷಣಾ ಪಡೆಗಳನ್ನು ಸಹಾಯಕ್ಕಾಗಿ ಬಳಸಬಹುದು. ಚಂಡಮಾರುತ ಅಪ್ಪಳಿಸಿದ ಪ್ರದೇಶಗಳಲ್ಲಿ ಭಾರೀ ಮಳೆ, ಗಾಳಿಗೆ ಜನರು ತತ್ತರಿಸಿದ್ದಾರೆ. ಅದೃಷ್ಟವಶಾತ್, ಚಂಡಮಾರುತದಿಂದ ಪ್ರಾಣಹಾನಿಯಾಗಿರುವ ವರದಿ ಆಗಿಲ್ಲ. ಜನವರಿ ಕೊನೆಯ ವಾರದಲ್ಲಿ ಆಕ್ಲೆಂಡ್ ನಗರದಲ್ಲಿ 24 ಗಂಟೆ ಅವಧಿಯಲ್ಲಿ 245 ಮಿಮೀಯಷ್ಟು ಮಳೆಯಾಗಿ ಅಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಿತ್ತು. ಆ ವಿಕೋಪಕ್ಕೆ ನಾಲ್ವರು ಬಲಿಯಾಗಿದ್ದರು.
ಇನ್ನು, ಕುತೂಹಲದ ಸಂಗತಿ ಎಂದರೆ ನ್ಯೂಜಿಲೆಂಡ್ ಇತಿಹಾಸದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಆಗಿರುವುದು ಇದು ಮೂರನೇ ಬಾರಿಯಂತೆ. ಅಲ್ಲಿನ ನಾಗರಿಕ ಸೌಕರ್ಯ ವ್ಯವಸ್ಥೆ ಪ್ರಬಲವಾಗಿರುವುದರಿಂದ ಗೇಬ್ರಿಯೆಲ್ ಚಂಡಮಾರುತದಿಂದ ಪ್ರಾಣಹಾನಿ ಆಗಿಲ್ಲ.