Mekedatu: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಹೊಗೆನಕಲ್ ಚಲೋಗೆ ಕರೆ

Aug 2, 2021

ಮೈಸೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಧರಣಿ ಖಂಡಿಸಿ ಹೊಗೆನಕಲ್ ಚಲೋ ಮೆರವಣಿಗೆಗೆ ಮೈಸೂರು ಕನ್ನಡ ವೇದಿಕೆ ಕರೆ ಕೊಟ್ಟಿದೆ. ಮೈಸೂರಿನ 101 ಗಣಪತಿ ದೇಗುಲದಿಂದ ಮೆರವಣಿಗೆ ಆರಂಭವಾಗಲಿದೆ. ಮಾರ್ಗಮಧ್ಯೆ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆಗೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಮೇಕೆದಾಟು ಯೋಜನೆ (Mekedatu Project) ಜಾರಿಯಾಗಲೇಬೇಕೆಂದು ಆಗ್ರಹಿಸಲಾಗುವುದು ಎಂದು ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ: ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್
ಮೇಕೆದಾಟು ಡ್ಯಾಂ ನಿರ್ಮಾಣ ವಿರೋಧಿಸಿ ಅಣ್ಣಾಮಲೈ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವ ಬಗ್ಗೆ ತಿಳಿದುಬಂದಿದೆ. ಮೇಕೆದಾಟು ಯೋಜನೆ ವಿರೋಧಿ ಧರಣಿ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಜುಲೈ 31) ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಉಪವಾಸ ಬೇಕಾದ್ರೂ ಮಾಡಲಿ, ಊಟ ಬೇಕಾದ್ರು ಮಾಡಲಿ. ಮೇಕೆದಾಟು ಡ್ಯಾಂ ನಿರ್ಮಾಣ ಮಾಡಲು ನಮಗೆ ಹಕ್ಕಿದೆ. ನಾವು ಮೇಕೆದಾಟು ಅಣೆಕಟ್ಟು ನಿರ್ಮಿಸಿಯೇ ತೀರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ವಿರೋಧಿಸಿ ಆಗಸ್ಟ್ 5ಕ್ಕೆ ತಮಿಳುನಾಡಿನಲ್ಲಿ ಸತ್ಯಾಗ್ರಹ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ತಮ್ಮ ನಿಲುವನ್ನು ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

Source: Tv9 kannada