ಮತ್ತೆ ಬರಲಿದೆ ಸಾಂಸ್ಥಿಕ ಕ್ವಾರಂಟೈನ್; ಬಿಬಿಎಂಪಿ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ

Aug 2, 2021

ಕೇರಳದಿಂದ ಕೊವಿಡ್ ಟೆಸ್ಟ್ ರಿಪೋರ್ಟ್ ಇಲ್ಲದೇ ರಾಜ್ಯಕ್ಕೆ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಲು ಆಲೋಚನೆ ಮಾಡಲಾಗಿದೆ. ಈ ನಿರ್ಧಾರಕ್ಕೆ ಮುಖ್ಯ ಕಾರಣ ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಕೇರಳದಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಸೋಂಕು ಧೃಡ ಪಡುತ್ತಿರುವುದೇ ಆಗಿದೆ.

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಕೊವಿಡ್​ ನಿಯಂತ್ರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಕರ್ನಾಟಕ ರಾಜ್ಯ ಸರ್ಕಾರ ಪೂರ್ಣ ಸ್ವಾತಂತ್ರ್ಯ ನೀಡಿದೆ. ಹೀಗಾಗಿ ಮತ್ತೆ ಸಾಂಸ್ಥಿಕ ಕ್ವಾರಂಟೈನ್, ಸೋಂಕಿತರಿಗೆ ಐಸೋಲೇಷನ್ ಬಗ್ಗೆ ಬಿಬಿಎಂಪಿ ಯೋಜನೆ ರೂಪಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೇರಳದಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಯೋಜನೆ ರೂಪಿಸಲಾಗಿದ್ದು, ಬಿಬಿಎಂಪಿ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ. ಕೇರಳದಿಂದ ಕೊವಿಡ್ ಟೆಸ್ಟ್ ರಿಪೋರ್ಟ್ ಇಲ್ಲದೇ ರಾಜ್ಯಕ್ಕೆ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಲು ಆಲೋಚನೆ ಮಾಡಲಾಗಿದೆ. ಈ ನಿರ್ಧಾರಕ್ಕೆ ಮುಖ್ಯ ಕಾರಣ ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಕೇರಳದಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಸೋಂಕು ಧೃಡ ಪಡುತ್ತಿರುವುದೇ ಆಗಿದೆ.

ಕೇರಳದಿಂದ ಯಾರೇ ಬಂದರು ಕ್ವಾರಂಟೈನ್ ಕಡ್ಡಾಯ ಎಂಬ ಯೋಜನೆಯ ಬಗ್ಗೆ ಇಂದು ಮತ್ತೆ ನಾಳೆ ಅಧಿಕೃತವಾಗಿ ಆದೇಶ ಹೊರಬೀಳುವ ಸಾಧ್ಯತೆ ಇದೆ. ಅಲ್ಲದೇ ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಕೈಗೆ ಸೀಲ್ ಹಾಕಿ ಕ್ವಾರಂಟೈನ್ ಮಾಡುವ ನಿಯಮವನ್ನು ಬಿಬಿಎಂಪಿ ಜಾರಿಗೆ ತರುವ ಸಾಧ್ಯತೆ ಇದೆ.

ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿಗೆ ಪೂರ್ಣ ಸ್ವಾತಂತ್ರ್ಯ
ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರೇ ಕ್ರಮ ತೆಗೆದುಕೊಳ್ಳಬಹುದು. ಕಂಟೇನ್ಮೆಂಟ್, ಸೀಲ್‌ಡೌನ್, ಕರ್ಫ್ಯೂ ಸಂಬಂಧ ನಿರ್ಧಾರವನ್ನು ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸಬೇಕಿತ್ತು. ಆದರೆ ಈಗ ಸರ್ಕಾರ ಬಿಬಿಎಂಪಿಗೆ ಸ್ವಾತಂತ್ರ್ಯ ಕೊಟ್ಟಿರುವ ಬಗ್ಗೆ ತಿಳಿದುಬಂದಿದೆ.

ಸೋಂಕಿತರು ಹೆಚ್ಚಾಗಿ ಪತ್ತೆಯಾಗುವ ಏರಿಯಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಒಂದು ಮನೆಯಲ್ಲಿ ಮೂರಕ್ಕಿಂತ ಹೆಚ್ಚು ಜನ ಸೋಂಕಿತರು ಪತ್ತೆಯಾದ್ರೆ ಇಡೀ ಮನೆ ಸೀಲ್ ಡೌನ್ ಮಾಡಲಾಗುವುದು. ಮನೆಯೊಳಗೆ, ಹೊರಗೆ ಯಾರು ಬರುವಂತಿಲ್ಲ ಹೋಗುವಂತಿಲ್ಲ. ಅಗತ್ಯ ವಸ್ತುಗಳ ಸರಬರಾಜು ಮಾಡುವ ಹೊಣೆ ಬಿಬಿಎಂಪಿಯದ್ದು. ಒಂದು ಮನೆ ಅಥವಾ ಒಂದೇ ಜಾಗದಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ 100 ಮೀಟರ್ ಪ್ರದೇಶವನ್ನ ಸೀಲ್ ಡೌನ್ ಮಾಡುವುದು. ರಸ್ತೆ, ಅಕ್ಕಪಕ್ಕದ ಮನೆಗಳು, ಬ್ಯಾರಿಕೇಡ್, ರೆಡ್ ಟೇಪ್ ಮೂಲಕ ಸೀಲ್ ಡೌನ್ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ವಿಕೇಂಡ್ ಕರ್ಫ್ಯೂ ಜಾರಿಗೆ ಬಿಬಿಎಂಪಿ ಮನವಿ ಮಾಡಿದೆ. ಹಾಫ್ ಡೇ ಕರ್ಫ್ಯೂ ಜಾರಿಗೆ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ. ವಿಕೇಂಡ್ ದಿನ‌ ಪಾರ್ಟಿಗಳ ಸಂಖ್ಯೆ ಹೆಚ್ಚಿದ್ದು, ಪಬ್ ಕೂಡ ಓಪನ್ ಆಗಿವೆ. ಪಬ್​ಗಳಿಗೆ ಅನುಮತಿ‌ ಇಲ್ಲದಿದ್ದರೂ ಪಬ್​ಗಳು ತೆರೆದುಕೊಂಡಿವೆ. ಹೀಗಾಗಿ ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೂ ಮಾತ್ರ ಜನರ ಓಡಾಟಕ್ಕೆ ಅವಕಾಶ ನೀಡಿ. ವಿಕೇಂಡ್ ದಿನ‌ ಸಂಜೆ 5 ಗಂಟೆಯಿಂದ ‌ಕರ್ಫ್ಯೂ ಜಾರಿಗೆ ಮನವಿ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಿದ ಬಳಿಕ ಆದೇಶ ಹೊರ ಬೀಳುವ ಸಾಧ್ಯತೆ ಕಂಡುಬಂದಿದೆ.

Source: Tv9 kannada