KGF Chapter 2: ಕೆಜಿಎಫ್ 2 ಚಿತ್ರಕ್ಕೂ ಮೊದಲೇ ತೆಲುಗು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರಂತೆ ಯಶ್! ಏನಿದು ಸರ್ಪ್ರೈಸ್?
ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡ ಮಣ್ಣಿನ ನಟ ಯಶ್ ಇದೀಗ ಬಹುಭಾಷಾ ನಟ. ಸದ್ಯ ಕೆಜಿಎಫ್ (KGF) ಚಿತ್ರದ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವರಾದರೂ ಕೊರೊನಾ ಕಾರಣದಿಂದ ಚಿತ್ರ ತೆರೆಕಾಣುವುದು ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ಆದರೆ, ಇದೀಗ ಯಶ್ (Rocking Star Yash) ಅಭಿಮಾನಿಗಳಿಗೆ ಖುಷಿ ಕೊಡುವ ಸುದ್ದಿಯೊಂದು ಬಣ್ಣದ ಲೋಕದಿಂದ ಕೇಳಿ ಬಂದಿದ್ದು ಕೆಜಿಎಫ್ 2 (KGF 2) ಸಿನಿಮಾಕ್ಕೂ ಮೊದಲೇ ಯಶ್ ತೆಲುಗು ಸಿನಿಮಾದಲ್ಲಿ ಸದ್ದು ಮಾಡಲಿದ್ದಾರೆ. ಬಲ್ಲ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಇದು ಕೆಜಿಎಫ್ 2 ಚಿತ್ರಕ್ಕೂ ಮೊದಲೇ ನೋಡುಗರನ್ನು ಎದುರಾಗಲಿದ್ದು, ತಮ್ಮಿಷ್ಟದ ನಟನನ್ನು ತೆಲುಗು ಸಿನಿಮಾದಲ್ಲಿ (Telugu Cinema) ನೋಡಿ ಖುಷಿಪಡಬಹುದಾಗಿದೆ.
ಅಂದಹಾಗೆ, ಈಗ ಸುದ್ದಿ ಮಾಡುತ್ತಿರುವ ಚಿತ್ರ ಯಶ್ ಅವರ ಮುಂದಿನ ಸಿನಿಮಾವಗಲೀ, ಅವರ ಅಭಿನಯದ ಹೊಸ ಚಿತ್ರವಾಗಲೀ ಅಲ್ಲ. ಬದಲಾಗಿ ಕನ್ನಡದಲ್ಲೇ ಭಾರೀ ಸದ್ದು ಮಾಡಿ ಜನಮನ ಗೆದ್ದಿದ್ದ ಚಿತ್ರವೊಂದರ ತೆಲುಗು ಅವತರಣಿಕೆ. 2012ರಲ್ಲಿ ಸದ್ದು ಮಾಡಿದ್ದ ಕನ್ನಡ ಸಿನಿಮಾ ಲಕ್ಕಿ ಇದೀಗ ತೆಲುಗು ಭಾಷೆಗೆ ಡಬ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಅಂದರೆ ಕೆಜಿಎಫ್ 2ಗೂ ಮೊದಲೇ ಬಿಡುಗಡೆಯಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಸದ್ಯದಲ್ಲೇ ತೆರೆ ಕಾಣಲಿರುವ ಲಕ್ಕಿ ತೆಲುಗು ಭಾಷೆಯಲ್ಲಿ ಸದ್ದು ಮಾಡಲಿದೆ.
ಕೊರೊನಾ ಉಪಟಳ ಕಡಿಮೆಯಾಗಿ ಚಿತ್ರಮಂದಿರಗಳು ಮೊದಲಿನಂತೆ ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಹೊಸಾ ಸಿನಿಮಾಗಳೊಂದಿಗೆ ಪ್ರೇಕ್ಷಕರ ಮುಂದೆ ಬರುವ ಮೊದಲು ಯಶಸ್ವೀ ಸಿನಿಮಾದ ಮೂಲಕವೇ ಮತ್ತೊಮ್ಮೆ ಜನರನ್ನು ಸೆಳೆಯುವ ತಂತ್ರ ಇದಾಗಿರಬಹುದು ಎನ್ನಲಾಗುತ್ತಿದೆ. ಲಕ್ಕಿ ಸಿನಿಮಾದ ತೆಲುಗು ಅವತರಣಿಕೆ ಜನರನ್ನು ಚಿತ್ರ ಮಂದಿರಗಳತ್ತ ಸೆಳೆಯುವ ಸಾಧ್ಯತೆ ದಟ್ಟವಾಗಿದ್ದು, ಒಂದುವೇಳೆ ಅದು ಯಶಸ್ವಿಯಾದಲ್ಲಿ ಮುಂಬರುವ ಸಿನಿಮಾಗಳಿಗೆ ಹಾದಿ ಸುಗಮವಾಗಲಿದೆ.
ಈ ಮೊದಲಿನ ಯೋಜನೆ ಪ್ರಕಾರ ಕೆಜಿಎಫ್2 ಕಳೆದ 2020ರ ಅಕ್ಟೋಬರ್ ತಿಂಗಳಲ್ಲೇ ತೆರೆ ಕಾಣಬೇಕಿತ್ತು. ಆದರೆ, ಕೊರೊನಾ ಹೆಚ್ಚಾದ ಕಾರಣ ದಿನಾಂಕ ಮುಂದೂಡಲ್ಪಟ್ಟಿತ್ತು. ಪರಿಸ್ಥಿತಿ ಸರಿಯಿದ್ದಲ್ಲಿ ಈ ವರ್ಷದ ಆರಂಭದಲ್ಲಾದರೂ ವೀಕ್ಷಕರಿಗೆ ಕೆಜಿಎಫ್ 2 ರಸದೌತಣ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಕೊರೊನಾ 2ನೇ ಅಲೆ ಪರಿಸ್ಥಿತಿಯನ್ನು ಹದಗೆಡಿಸಿದ ಪರಿಣಾಮ ಅದೂ ಸಾಧ್ಯವಾಗಿಲ್ಲ. ಸದ್ಯ ಕೊರೊನಾ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ದೊಡ್ಡ ದೊಡ್ಡ ಸಿನಿಮಾಗಳು ಚಿತ್ರಮಂದಿರವನ್ನು ಪ್ರವೇಶಿಸಲಿವೆ ಎನ್ನಲಾಗುತ್ತಿದೆ.
Source: tv9 kannada