ಕೆಜಿಎಫ್​ ರಾಕಿ ಭಾಯ್​ ಅಮ್ಮ ಅರ್ಚನಾ ಜೋಯಿಸ್​ಗೆ ಬಂತು ಬಿಗ್​ ಆಫರ್​

Apr 14, 2021

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದಷ್ಟೇ ಚಿತ್ರತಂಡ ಹೇಳಿಕೊಂಡಿದೆ. ಆದರೆ, ಪಾತ್ರಗಳ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಮನೆಮಾತಾಗಿದ್ದವರು ಅರ್ಚನಾ ಜೋಯಿಸ್. ರಾಕಿ ಬಾಯಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಅಷ್ಟೇ ಅಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಅವರಿಗೆ ಅವಕಾಶ ಸಿಗುತ್ತಿದೆ. ಈಗ ಅರ್ಚನಾ ಜೋಯಿಸ್​ಗೆ ಬಿಗ್​ ಆಫರ್​ ಒಂದು ಒಲಿದು ಬಂದಿದೆ. ಪ್ಯಾನ್​ ಇಂಡಿಯಾ ಚಿತ್ರದಲ್ಲಿ ನಟಿಸೋಕೆ ಅವಕಾಶ ಸಿಕ್ಕಿದ್ದು, ಈ ಚಿತ್ರಕ್ಕೆ ಮುಂಗಾರುಮಳೆ-2 ನಿರ್ಮಾಪಕ ಹಣ ಹೂಡುತ್ತಿದ್ದಾರೆ ಅನ್ನೋದು ವಿಶೇಷ.

ಖ್ಯಾತ ನಿರ್ಮಾಪಕ ಜಿ.ಗಂಗಾಧರ್ ನಿರ್ಮಾಣದ ಹೊಸ ಚಿತ್ರ #ಮ್ಯೂಟ್​​ನಲ್ಲಿ ಅರ್ಚನಾ ಜೋಯಿಸ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಶೀರ್ಷಿಕೆಯ ಕುರಿತ 40 ಸೆಕೆಂಡ್ ವಿಡಿಯೊವೊಂದನ್ನು ಚಿತ್ರತಂಡ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಆಡುಕಲಂ ನರೇನ್ ನಟಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದಕ್ಕೂ ಮೊದಲು ಚಿತ್ರದ ಶೀರ್ಷಿಕೆಯನ್ನು ನಟ ರಿಷಿ ಬುಧವಾರ ಬಿಡುಗಡೆಗೊಳಿಸಿದರು. ಮುಂಗಾರುಮಳೆ ಹಾಗೂ ಮೊಗ್ಗಿನಮನಸು ಚಿತ್ರಗಳಲ್ಲಿ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದ ಜಿ.ಗಂಗಾಧರ್ ನಂತರ ಮುಂಗಾರುಮಳೆ-2ಗೆ ಹಣ ಹೂಡಿದ್ದರು. ಈಗ ಅವರು ಪ್ಯಾನ್​ ಇಂಡಿಯಾ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನವ ನಿರ್ದೇಶಕ ಪ್ರಶಾಂತ್ ಚಂದ್ರ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಸದ್ದಿಲ್ಲದೆ ಶೂಟಿಂಗ್ ಕೂಡ ಪೂರ್ಣಗೊಂಡಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದಷ್ಟೇ ಚಿತ್ರತಂಡ ಹೇಳಿಕೊಂಡಿದೆ. ಆದರೆ, ಪಾತ್ರಗಳ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ಚಂದ್ರ, ನಿರ್ದೇಶಕನಾಗಿ ಇದು ನನಗೆ ಚೊಚ್ಚಲ ಚಿತ್ರ. ಸಿನಿಮಾದ ಕಥೆ ವಿಭಿನ್ನವಾಗಿದೆ. ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಸಾಕಷ್ಟು ತಿರುವುಗಳು ನೋಡಲು ಸಿಗಲಿವೆ. ಶೂಟಿಂಗ್ ಮುಗಿಯುವವರೆಗೂ ನಾವು ಸಿನಿಮಾ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಸಿನಿಮಾ ಉತ್ತಮವಾಗಿ ಮೂಡಿ ಬರಲಿದೆ ಎನ್ನುವ ನಂಬಿಕೆ ನಮ್ಮದು ಎಂದಿದ್ದಾರೆ.

#ಮ್ಯೂಟ್ ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಿದ ರಿಷಿ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರಶಾಂತ್ ಚಂದ್ರ ಅವರ ನಿರ್ದೇಶನದ ಈ ಸಿನಿಮಾಗೆ ಯಶಸ್ಸು ಸಿಗಲಿ ಎಂದು ಅವರು ಹಾರೈಸಿದ್ದಾರೆ.

Source: TV9Kannada