IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ದ್ವಿತಿಯಾರ್ಧ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಎದುರಿಸಿದರೆ, ಸೆಪ್ಟೆಂಬರ್ 20 ರಂದು ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ದ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಅಭಿಯಾನ ಆರಂಭಿಸಲಿದೆ. ಇನ್ನು ದ್ವಿತಿಯಾರ್ಧದ ಅಭಿಮಾನದಲ್ಲಿ ಆರ್ಸಿಬಿ ಬಳಗದಲ್ಲಿ ಐವರು ಹೊಸ ಆಟಗಾರರು ಸೇರ್ಪಡೆಯಾಗಿರುವುದು ವಿಶೇಷ. ಆ್ಯಡಂ ಝಂಪಾ, ಡೇನಿಯಲ್ ಸ್ಯಾಮ್ಸ್, ಫಿನ್ ಅಲೆನ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್ ಬದಲಿಗೆ ವನಿಂದು ಹಸರಂಗ, ದುಷ್ಮಂತ ಚಮೀರಾ, ಟಿಮ್ ಡೇವಿಡ್, ಜಾರ್ಜ್ ಗಾರ್ಟನ್ ಹಾಗೂ ಆಕಾಶ್ ದೀಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆರ್ಸಿಬಿ ತಂಡದ ಈ ಐವರು ಹೊಸ ಆಟಗಾರರಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಗಾಗಿರುವ ಹೆಸರು ಎಂದರೆ ಟಿಮ್ ಡೇವಿಡ್. ಸಿಂಗಪೂರ್ ದೇಶದ ಕ್ರಿಕೆಟಿಗ ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ತನ್ನ ಸಾಮರ್ಥ್ಯವನ್ನು ತೆರೆಟಿದ್ದಾರೆ. ಹೀಗಾಗಿಯೇ ಟಿಮ್ ಡೇವಿಡ್ ಆಗಮನ ಆರ್ಸಿಬಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದಕ್ಕೆ ಬಹುಮುಖ್ಯ ಕಾರಣ, ಇತ್ತೀಚೆಗೆ ಮುಕ್ತಾಯವಾಗಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿನ ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ. ಸಿಪಿಎಲ್ನಲ್ಲಿ 11 ಪಂದ್ಯಗಳನ್ನಾಡಿರುವ ಡೇವಿಡ್ 282 ರನ್ ಕಲೆಹಾಕಿದ್ದಾರೆ. ಅದು ಕೂಡ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಎಂಬುದು ವಿಶೇಷ. ಅಂದರೆ ಡೆತ್ ಓವರ್ಗಳಲ್ಲಿ ಹೆಚ್ಚಾಗಿ ಬ್ಯಾಟ್ ಬೀಸಿರುವ ಟಿಮ್ ಪ್ರತಿ ಪಂದ್ಯದಲ್ಲೂ 35 ರ ಸರಾಸರಿಯಲ್ಲಿ 146 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಟೂರ್ನಿಯುದ್ದಕ್ಕೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಟಿಮ್ ಡೇವಿಡ್ ಅಂತಿಮ ಓವರ್ಗಳಲ್ಲಿ ಲೂಸಿಯಾ ಕಿಂಗ್ಸ್ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆ ಟಿಮ್ ಡೇವಿಡ್ ಕೆರಿಬಿಯನ್ ಲೀಗ್ನಲ್ಲಿ ಸಿಡಿಸಿರುವುದು 19 ಬೌಂಡರಿ ಹಾಗೂ 19 ಭರ್ಜರಿ ಸಿಕ್ಸರ್. ಹೀಗಾಗಿ ಇದೇ ಫಾರ್ಮ್ ಆರ್ಸಿಬಿ ಪಾಲಿಗೆ ವರದಾನವಾಗಲಿದೆ.
ಏಕೆಂದರೆ ಆರ್ಸಿಬಿ ತಂಡದಲ್ಲಿ 4ನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, 5ನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಟಿಮ್ ಡೇವಿಡ್ ಅವರನ್ನು ಆರ್ಸಿಬಿ 6ನೇ ಕ್ರಮಾಂಕದಲ್ಲಿ ಬಳಸಿಕೊಂಡರೆ ಡೆತ್ ಓವರ್ಗಳಲ್ಲಿ ಹೆಚ್ಚಿನ ರನ್ಗಳಿಸಬಹುದು. ಇಲ್ಲ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತಂದು ಮ್ಯಾಕ್ಸ್ವೆಲ್ 3ನೇ, ಎಬಿಡಿ 4ನೇ ಹಾಗೂ ಡೇವಿಡ್ ಅವರನ್ನು 5ನೇ ಕ್ರಮಾಂಕದಲ್ಲಿ ಆಡಿಸಬಹುದು. ಇದರಿಂದ ಆರ್ಸಿಬಿ ತಂಡ ಮೊದಲ ಐದು ಕ್ರಮಾಂಕ ಬಲಿಷ್ಠ ದಾಂಡಿಗರನ್ನು ಕಣಕ್ಕಿಳಿಸಬಹುದು.
ಅಷ್ಟೇ ಅಲ್ಲದೆ ಟಿಮ್ ಡೇವಿಡ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬಳಸಿಕೊಳ್ಳುವುದರಿಂದ ಎಬಿಡಿ ಹಾಗೂ ಮ್ಯಾಕ್ಸ್ವೆಲ್ ಮೇಲಿನ ಒತ್ತಡ ಕೂಡ ಕಡಿಮೆಯಾಗಲಿದೆ. ಇದರಿಂದ ಮತ್ತಷ್ಟು ಉತ್ತಮವಾಗಿ ಆಡಲು ಈ ಇಬ್ಬರು ಅನುಭವಿ ಆಟಗಾರರಿಗೆ ಸಾಧ್ಯವಾಗಲಿದೆ. ಇತ್ತ ಡೆತ್ ಓವರ್ಗಳಲ್ಲಿ ಸ್ಪೋಟಕ ಇನಿಂಗ್ಸ್ ಕಟ್ಟುವ ಟಿಮ್ ಡೇವಿಡ್ ಯಾವುದೇ ಪಂದ್ಯದ ಚಿತ್ರಣ ಬದಲಿಸಬಲ್ಲರು. ಹೀಗಾಗಿ ಆರ್ಸಿಬಿ ತಂಡ ಟಾಸ್ ಚಿಂತೆಯನ್ನು ದೂರ ಮಾಡಬಹುದು.
ಇನ್ನು ಕಳೆದ 9 ತಿಂಗಳಲ್ಲಿ ಟಿಮ್ ಡೇವಿಡ್ 6 ಕ್ರಿಕೆಟ್ ಲೀಗ್‌ಗಳನ್ನು ಆಡಿದ್ದಾರೆ. ಬಿಗ್ ಬ್ಯಾಷ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್, ದಿ ಹಂಡ್ರೆಡ್, ಟಿ20 ಬ್ಲಾಸ್ಟ್, ಕೆರಿಬಿಯನ್ ಪ್ರೀಮಿಯರ್ ಲೀಗ್ ನಂತಹ ಪ್ರತಿಷ್ಠಿತ ಕ್ರಿಕೆಟ್ ಲೀಗ್‌ಗಳನ್ನು ಆಡಿರುವ ಡೇವಿಡ್ ವಿಶ್ವದ ಅತ್ಯುತ್ತಮ ಬೌಲರುಗಳನ್ನು ಎದುರಿಸಿದ್ದಾರೆ. ಹಾಗೆಯೇ 360 ಡಿಗ್ರಿಯಲ್ಲಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವನ್ನೂ ಸಹ ಹೊಂದಿದ್ದಾರೆ. ಹೀಗಾಗಿ ಆರ್ಸಿಬಿ ತಂಡದಲ್ಲಿ ಬಿರುಸಿನ ದಾಂಡಿಗರ ಪಟ್ಟಿಗೆ ಟಿಮ್ ಡೇವಿಡ್ ಹೊಸ ಸೇರ್ಪಡೆ ಎನ್ನಬಹುದು.
ಈಗಾಗಲೇ ಮೊದಲಾರ್ಧದಲ್ಲಿ ಸ್ಪೋಟಕ ಇನಿಂಗ್ಸ್ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಎಬಿಡಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಇದೀಗ ಟಿಮ್ ಡೇವಿಡ್ ಕೂಡ ತಂಡಕ್ಕೆ ಆಗಮಿಸಿರುವುದು ಬ್ಯಾಟಿಂಗ್ ವಿಭಾಗಕ್ಕೆ ಆನೆ ಬಲ ಬಂದಂತಾಗಿದೆ. ಹೀಗಾಗಿಯೇ ಆರ್ಸಿಬಿ ತಂಡದಲ್ಲಿ ಟಿಮ್ ಡೇವಿಡ್ ಗೇಮ್ ಚೇಂಜರ್ ಆಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
Source:tv9kannada