IPL 2021: ಈ ಬಾರಿ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್​ಸಿಬಿ: ರಿವೀಲ್ ಮಾಡಿತು ಫ್ರಾಂಚೈಸಿ

Sep 14, 2021

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 19 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MI vs CSK) ಸೆಣೆಸಾಟ ನಡೆಸುವ ಮೂಲಕ ಅರ್ಧಕ್ಕೆ ನಿಂತಿದ್ದ ಟೂರ್ನಿಗೆ ಮತ್ತೆ ಚಾಲನೆ ಸಿಗಲಿದೆ. ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆ. 20 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (RCB vs CSK) ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲೇ ಆರ್​ಸಿಬಿ ಹೊಸ ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪ್ರತಿ ಸೀಸನ್​ನಲ್ಲಿ ರೆಡ್ ಮತ್ತು ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ ಸೈನ್ಯ ಈ ಬಾರಿ ಬ್ಲೂ ಜೆರ್ಸಿಯಲ್ಲಿ (Blue Jersey) ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಕಳೆದೊಂದು ವರ್ಷದಿಂದ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್​ಗೆ ಗೌರವ ಸೂಚಿಸುವ ಕಾರಣಗಳಿಂದ ಆರ್​ಸಿಬಿ ನೀಲಿ ಜೆರ್ಸಿ ಧರಿಸಿ ಆಡಲಿದೆ. ಇದು ಅವರ ಅಮೂಲ್ಯ ಸೇವೆಗೆ ಗೌರವ ಸಲ್ಲಿಸುವ ಉದ್ದೇಶವಾಗಿದೆ. ಪಿಪಿಇ ಕಿಟ್‌ಗಳ ಬಣ್ಣವನ್ನು ಹೋಲುವ ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿದು ಆರ್‌ಸಿಬಿ ಗೌರವ ಸೂಚಿಸಲಿದೆ ಎಂದು ಫ್ರಾಂಚೈಸಿ ಹೇಳಿದೆ.

ಆರ್​ಸಿಬಿ ತಂಡದ ಬಹುತೇಕ ಆಟಗಾರರು ಈಗಾಗಲೇ ದುಬೈಗೆ ತಲುಪಿದ್ದು ಕೆಲ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್​ನಿಂದ ನೇರವಾಗಿ ಯುಎಇಗೆ ತಲುಪಿದ್ದು, ಆರು ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ. ಡಿವಿಲಿಯರ್ಸ್​ ಈಗಾಗಲೇ ನೆಟ್​ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ತಂಡ ಸೇರಿಕೊಂಡಿದ್ದಾರೆ.

ಆರ್‌ಸಿಬಿಯ ಬದಲಿ ಆಟಗಾರರಾಗಿರುವ ಶ್ರೀಲಂಕಾದ ವನಿದು ಹಸರಂಗ ಮತ್ತು ದುಷ್ಮಂತ ಚಮೀರಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿ ಆಡುತ್ತಿದ್ದು, ಇದು ಮುಗಿದ ಬಳಿಕ ಆರ್​ಸಿಬಿ ಸೇರಲಿದ್ದಾರೆ.

ಆರ್‌ಸಿಬಿ ಪ್ರಸ್ತುತ 8 ತಂಡ ಪಾಯಿಂಟ್‌ಗಳ ಪಟ್ಟಿಯಲ್ಲಿ 10 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಮೂರನೇ ಸ್ಥಾನದಲ್ಲಿದೆ ಹಾಗೂ ಎರಡನೇ ಸೀಸನ್‌ಗೆ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯಲು ಉತ್ತಮವಾಗಿದೆ.

Source:tv9kannada