IBM: ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದ ಐಬಿಎಂ ಸಿಬ್ಬಂದಿ ಮರಳಿ ಕಚೇರಿಗೆ; ಸೆಪ್ಟೆಂಬರ್​ನಲ್ಲಿ ಆರಂಭಿಸಲು ಸಿದ್ಧತೆ

Aug 14, 2021

ಇಂಟರ್​ನ್ಯಾಷನಲ್ ಬಿಜಿನೆಸ್ ಮಷೀನ್ಸ್ ಕಾರ್ಪ್ (IBM) ಶುಕ್ರವಾರ ತಿಳಿಸಿರುವಂತೆ ಪೂರ್ಣ ಪ್ರಮಾಣದಲ್ಲಿ ಕೊರೊನಾ ಲಸಿಕೆ ಪಡೆದಂಥ ಅಮೆರಿಕದ ಉದ್ಯೋಗಿಗಳು ಕಚೇರಿಗೆ ಮರಳಬಹುದು. ಕೊವಿಡ್​-19 ಡೆಲ್ಟಾ ವ್ಯಾಪಕವಾಗಿ ಹಬ್ಬುತ್ತಿರುವ ಮಧ್ಯೆಯೂ ಸೆಪ್ಟೆಂಬರ್ 7ನೇ ತಾರೀಕಿನಿಂದ ಕಚೇರಿ ಪುನರಾರಂಭಕ್ಕೆ ಎಲ್ಲ ಸಿದ್ಧತೆ ನಡೆದಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. “ನಾವು ಅಮೆರಿಕದ ಹಲವು ಕಚೇರಿಗಳನ್ನು ಸೆಪ್ಟೆಂಬರ್ 7ರ ವಾರದಲ್ಲಿ ತೆರೆಯುತ್ತೇವೆ; ಅದಕ್ಕೆ ಸ್ಥಳೀಯ ಕ್ಲಿನಿಕಲ್ ಸನ್ನಿವೇಶವು ಅವಕಾಶ ಮಾಡಿಕೊಡಬೇಕು. ಆದರೆ ಕಚೇರಿ ಪುನರಾರಂಭವು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಂಥ ಉದ್ಯೋಗಿಗಳು ಯಾರು ಕಚೇರಿಗೆ ಬಂದು ಕೆಲಸ ಮಾಡುವುದಕ್ಕೆ ಆರಿಸಿಕೊಂಡಿರುತ್ತಾರೋ ಅಂಥವರಿಗೆ ಅವಕಾಶ ಮಾಡಿಕೊಡುತ್ತದೆ,” ಎಂದು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಲಮೊರೆಕ್ಸ್ ತಿಳಿಸಿರುವುದಾಗಿ ಸಿಬ್ಬಂದಿಗೆ ಕಳುಹಿಸಿರುವು ಸುತ್ತೋಲೆಯಲ್ಲಿ ಇದೆ.

ಕೊವಿಡ್​-19 ಡೆಲ್ಟಾ ರೂಪಾಂತರಿ ಪ್ರಕರಣಗಳು ಅಮೆರಿಕದಲ್ಲಿ ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಅಮೆರಿಕದ ಸೆಂಟರ್ಸ್​ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಕಡೆಯಿಂದ ಹೊರಡಿಸಿರುವ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರು ಸಹ ಮಾಸ್ಕ್ ಧರಿಸಬೇಕು. ಈ ನಿರ್ದೇಶನದ ನಂತರದಲ್ಲಿ ಕಚೇರಿಗಳಿಗೆ ಹಿಂತಿರುಗುವ ಯೋಜನೆ, ಲಸಿಕೆ ಹಾಗೂ ಮಾಸ್ಕ್ ಧರಿಸುವ ವಿಚಾರದಲ್ಲಿ ಕಂಪೆನಿಗಳು ಬದಲಾವಣೆ ಮಾಡಿಕೊಳ್ಳಬೇಕಾಯಿತು.

ಪೂರ್ಣ ಪ್ರಮಾಣದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಕಂಪೆನಿಯು ಉದ್ಯೋಗಿಗಳಿಗೆ ತಿಳಿಸಿದೆ. ಇದಕ್ಕೂ ಮುನ್ನ ಕಳೆದ ಗುರುವಾರದಂದು ಫೇಸ್​ಬುಕ್​ನಿಂದ ಎಲ್ಲ ಯು.ಎಸ್​. ಹಾಗೂ ಅಂತರರಾಷ್ಟ್ರೀಯ ಉದ್ಯೋಗಿಗಳಿಗೆ ಕಚೇರಿಗೆ ಹಿಂತಿರುಗುವ ಅವಧಿಯನ್ನು 2022ರ ಜನವರಿಗೆ ಹಾಕಲಾಗಿದೆ. ​ಇನ್ನು ಶಾಶ್ವತವಾಗಿ ವರ್ಕ್​ ಫ್ರಮ್ ಹೋಮ್ ಮಾಡಲು ಬಯಸುವ ಸಿಬ್ಬಂದಿಯು ಉದ್ಯೋಗ ಕಡಿತಕ್ಕೆ ಸಿದ್ಧರಾಗಿ ಎಂದು ಗೂಗಲ್ ತಿಳಿಸಿದೆ. ಇನ್ನು ಕಡಿಮೆ ವೆಚ್ಚದ ಪ್ರದೇಶಗಳಿಗೆ ತೆರಳಿ, ಅಲ್ಲಿಂದಲೇ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಫೇಸ್​ಬುಕ್ ಮತ್ತು ಟ್ವಿಟ್ಟರ್ ಕೂಡ ವೇತನ ಕಡಿತ ಮಾಡುತ್ತದೆ.

Source: tv9 kannada