ODI World Cup 2023: ಭಾರತ- ಪಾಕ್ ಪಂದ್ಯ ಸೇರಿದಂತೆ ಈ 6 ಪಂದ್ಯಗಳ ದಿನಾಂಕ ಬದಲಾವಣೆ..! ವರದಿ

Aug 2, 2023

ODI World Cup 2023: ಮಾಹಿತಿ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಜೊತೆಗೆ 6 ಪಂದ್ಯಗಳ ದಿನಾಂಕ ಬದಲಾಗಲಿದೆ ಎಂದು ವರದಿಯಾಗಿದೆ.

ವಿಶ್ವಕಪ್ (ODI World Cup 2023) ವೇಳಾಪಟ್ಟಿಯ ಕುರಿತಾಗಿ ಸೃಷ್ಟಿಯಾಗಿರುವ ಗೊಂದಲ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹಿಂದೆ ಪ್ರಕಟವಾಗಿದ್ದ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ (narendra modi stadium) ನಡೆಯಬೇಕಿತ್ತು. ಆದರೆ ಆ ದಿನದಿಂದ ಭಾರತದಲ್ಲಿ ನವರಾತ್ರಿ ಆರಂಭವಾಗುವುದರಿಂದ ಭದ್ರತಾ ಸಮಸ್ಯೆ ಎದುರಾಗುವ ಸೂಚನೆಯನ್ನು ಭದ್ರತಾ ಏಜೆನ್ಸಿಗಳು ಬಿಸಿಸಿಐಗೆ (BCCI) ನೀಡಿದ್ದವು. ಹೀಗಾಗಿ ಅದೊಂದು ಪಂದ್ಯದ ದಿನಾಂಕ ಬದಲಾಗಲಿದೆ ಎಂದು ಮೊದಲು ವರದಿಯಾಗಿತ್ತು. ಆದರೆ ಆ ಬಳಿಕ ನಡೆದ ಬಿಸಿಸಿಐ ಸಭೆಯಲ್ಲಿ ಮೂರು ದೇಶಗಳು ಪಂದ್ಯದ ವೇಳಾಪಟ್ಟಿಯನ್ನು ಬದಲಿಸುವಂತೆ ಐಸಿಸಿಗೆ ಮನವಿ ಮಾಡಿದ್ದವು. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಜೊತೆಗೆ 6 ಪಂದ್ಯಗಳ ದಿನಾಂಕ ಬದಲಾಗಲಿದೆ ಎಂದು ವರದಿಯಾಗಿದೆ.

ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಅಕ್ಟೋಬರ್ 15 ರ ಬದಲು, ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.

ಒಟ್ಟು 6 ಪಂದ್ಯಗಳ ದಿನಾಂಕ ಬದಲಾವಣೆ?

ಆದರೆ, ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಜೊತೆಗೆ ಪಾಕಿಸ್ತಾನದ ಮತ್ತೊಂದು ಪಂದ್ಯದ ದಿನಾಂಕವನ್ನೂ ಬದಲಾಯಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 12 ರಂದು ನಡೆಯಬೇಕಿದ್ದ ಭಾರತ ಹಾಗೂ ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯ, ಅಕ್ಟೋಬರ್ 10 ರಂದು ನಡೆಯಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ತಂಡಗಳ ಪಂದ್ಯದ ದಿನಾಂಕದಲ್ಲೂ ಬದಲಾವಣೆ

ಪಾಕಿಸ್ತಾನದ 2 ಪಂದ್ಯಗಳ ದಿನಾಂಕದ ಬದಲಾವಣೆಯ ಜೊತೆಗೆ , ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವೇಳಾಪಟ್ಟಿಯನ್ನು ಸಹ ಬದಲಾಯಿಸಲಾಗಿದೆ. ವರದಿ ಪ್ರಕಾರ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಅಕ್ಟೋಬರ್ 14 ರ ಬದಲು ಒಂದು ದಿನದ ನಂತರ ಅಂದರೆ ಅಕ್ಟೋಬರ್ 15 ರಂದು ನಡೆಯಲಿದೆ. ಇದಲ್ಲದೇ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ದಿನಾಂಕದಲ್ಲೂ ಬದಲಾವಣೆಯಾಗಿದೆ ಎಂದು ವರದಿಯಾಗಿದೆ.

ಹೊಸ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟ

ಒಂದು ಪಂದ್ಯದ ದಿನಾಂಕ ಬದಲಾವಣೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಾಗಲೇ ಬಿಸಿಸಿಐ ಹಾಗೂ ಐಸಿಸಿ ಕೆಲಸ ಆರಂಭಿಸಿವೆ. ವರದಿ ಪ್ರಕಾರ, ಐಸಿಸಿ ಶೀಘ್ರದಲ್ಲೇ ಅಂದರೆ, ಇನ್ನೆರಡು ದಿನದಲ್ಲಿ ಹೊಸ ವಿಶ್ವಕಪ್ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ.

 

Source: TV9 KANNADA