ಕಿಂಗ್​ ರಿಚರ್ಡ್ಸ್ ಟೆಸ್ಟ್​ ಪಂದ್ಯದಲ್ಲಿ 56 ಬಾಲ್​ಗಳಲ್ಲಿ ಬಾರಿಸಿದ್ದ ಮೊದಲ ಕ್ಷಿಪ್ರ ಸೆಂಚುರಿ ನೆನಪಿಸಿಕೊಂಡ ಐಸಿಸಿ! ವಿಶೇಷ ಏನು ಗೊತ್ತಾ?

Apr 15, 2021

ವಿವಿಯನ್​ ರಿಚರ್ಡ್ಸ್​ ದ್ವಿತೀಯ ಪಾಳಿಯಲ್ಲಿ 58 ಬಾಲಿನಲ್ಲಿಯೇ 110 ರನ್​ ಬಾರಿಸಿ ನಾಟೌಟ್​ ಆಗಿದ್ದರು. ಆಗ ವಿಂಡೀಸ್ ತನ್ನ ಎರಡನೆಯ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿತ್ತು. ಕುತೂಹಲದ ಸಂಗತಿಯೆಂದರೆ ರಿಚರ್ಡ್ಸ್ ಅತ್ಯುತ್ತಮ ಫಾರಂನಲ್ಲಿ ಬ್ಯಾಟ್​ ಬೀಸುತ್ತಿದ್ದರೂ ತಂಡದ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಸ್ವತಃ ಅವರೇ ಕ್ಯಾಪ್ಟನ್​ ಆಗಿ ತಂಡದ ಮೊತ್ತವನ್ನು ಡಿಕ್ಲೇರ್​ ಮಾಡಿಕೊಂಡು ಭರ್ಜರಿ ಸವಾಲೊಡ್ಡಿದ್ದರು.
ವಿಂಡೀಸ್​ ದ್ವೀಪ ಪ್ರದೇಶದಲ್ಲಿ ಜನಿಸಿದ 69 ವರ್ಷದ ಸರ್​ ಐಸಾಕ್​ ವಿವಿಯನ್​ ಅಲೆಕ್ಸಾಂಡರ್​ ರಿಚರ್ಡ್ಸ್​ ಎಂಬ ದೈತ್ಯ ಪ್ರತಿಭೆ, ಬ್ಯಾಟ್ಸ್​ಮನ್ ಆಗಿ.. ಸರಿಯಾಗಿ ಇದೇ ದಿನ 1986ರಲ್ಲಿ ಇಂಗ್ಲೆಂಡ್​ ತಂಡದ ವಿರುದ್ಧ ಅಮೋಘ ಸಾಧನೆಯೊಂದನ್ನು ಮಾಡಿದ್ದರು. ಹೌದು ಟೆಸ್ಟ್​ ಪಂದ್ಯವೊಂದರಲ್ಲಿ ಕೇವಲ 56 ಬಾಲ್​ಗಳಲ್ಲಿ ಮೊದಲ ಬಾರಿಗೆ ಕ್ಷಿಪ್ರ ಸೆಂಚುರಿ ಬಾರಿಸಿದ್ದ ಸಾಧನೆ ಮಾಡಿದ್ದು ಇದೇ ವಿವ್​ ರಿಚರ್ಡ್ಸ್​ ಎಂಬ ವಿಂಡೀಸ್ ದೈತ್ಯ ಎಂದು ಐಸಿಸಿ ಟ್ವೀಟ್​ ಮಾಡಿ, ಆ ಸಾಧನೆಯನ್ನು ಸ್ಮರಿಸಿದೆ. ಅದಾದಮೇಲೆ ಕೇವಲ 54 ಬಾಲ್​ಗಳಲ್ಲಿಯೇ ದಾಯಾದಿ ರಾಷ್ಟ್ರವಾದ ಆಸ್ಟ್ರೇಲಿಯಾದ ವಿರುದ್ಧ ನ್ಯೂಜಿಲ್ಯಾಂಡ್​ನ ಓಪನಿಂಗ್ ಬ್ಯಾಟ್ಸ್​ಮನ್​ ಬ್ರಾಂಡನ್ ಮೆಕಲಂ ಕ್ರೈಸ್ಟ್​ಚರ್ಚ್​ನಲ್ಲಿ ಅದಕ್ಕಿಂತ ವೇಗವಾದ ಶತಕ ಬಾರಿಸಿ, ದಾಖಲೆಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದರು ಎಂಬುದೂ ಇಲ್ಲಿ ದಾಖಲಾರ್ಹ. ಅದಕ್ಕೂ ಮುನ್ನ, ಜೊಹಾನ್ಸ್​ಬರ್ಗ್​​ನಲ್ಲಿ 1921-22ರಲ್ಲಿ ಜಾಕ್​ ಗ್ರಗೊರಿ 67 ಬಾಲ್​ನಲ್ಲಿ ಬಾರಿಸಿದ್ದ ಶತಕವೇ ಅತ್ಯಂತ ವೇಗದ ಶತಕವಾಗಿತ್ತು.
ಇಂದಿನ ಐಪಿಎಲ್ ಯುಗದಲ್ಲಿ ಅಂದಿನ ​56 ಬಾಲ್​ ಸೆಂಚುರಿಯನ್ನು ಮೆಲುಕು ಹಾಕುವುದಾದರೆ!
ಕಿಂಗ್​ ವಿವ್​ ರಿಚರ್ಡ್ಸ್ ಕೇವಲ 56 ಬಾಲ್​ಗಳಲ್ಲಿ ಬಾರಿಸಿದ್ದ ಮೊದಲ ಕ್ಷಿಪ್ರ ಸೆಂಚುರಿ ಬಗ್ಗೆ ಹೇಳುವುದಾದರೆ ಅದೇ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ರಿಚರ್ಡ್ಸ್ ಕೇವಲ 26 ರನ್​ ಗಳಿಸಿ ಔಟ್​ ಆಗಿದ್ದರು. ಆದರೆ ದ್ವಿತೀಯ ಪಾಳಿಯಲ್ಲಿ 58 ಬಾಲಿನಲ್ಲಿಯೇ 110 ರನ್​ ಬಾರಿಸಿ ನಾಟೌಟ್​ ಆಗಿದ್ದರು. ವಿಂಡೀಸ್​ನ ಆಂಟಿಗುವಾದ ಸೆಂಟ್​ ಜಾನ್ಸ್​ನಲ್ಲಿ ನಡೆದ ಆ ಕೊನೆಯ ಟೆಸ್ಟ್​ ಪಂದ್ಯದಲ್ಲಿ ವಿಂಡೀಸ್​ ತಂಡ 2 ವಿಕೆಟ್​ ಕಳೆದುಕೊಂಡು 246 ರನ್​ ಗಳಿಸಿತ್ತು.
ಆಗ ವಿಂಡೀಸ್ ತನ್ನ ಎರಡನೆಯ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿತ್ತು. ಕುತೂಹಲದ ಸಂಗತಿಯೆಂದರೆ ರಿಚರ್ಡ್ಸ್ ಅತ್ಯುತ್ತಮ ಫಾರಂನಲ್ಲಿ ಬ್ಯಾಟ್​ ಬೀಸುತ್ತಿದ್ದರೂ ತಂಡದ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಸ್ವತಃ ಅವರೇ ಕ್ಯಾಪ್ಟನ್​ ಆಗಿ ತಂಡದ ಮೊತ್ತವನ್ನು ಡಿಕ್ಲೇರ್​ ಮಾಡಿಕೊಂಡು ಭರ್ಜರಿ ಸವಾಲೊಡ್ಡಿದ್ದರು. ಅಂದಹಾಗೆ, ಅದು ರಿಚರ್ಡ್ಸ್ ಅವರ ಹೋಮ್​ ಪಿಚ್​ ಆಗಿತ್ತು. ಕ್ಲೈವ್​ ಲಾಯ್ಡ್​ ಎಂಬ ಮತ್ತೊಬ್ಬ ದೈತ್ಯ ಬ್ಯಾಟ್ಸ್​​ಮನ್​​ ಕಾಲ ಮುಗಿಯುತ್ತಾ ಬಂದು, ಆತನಿಂದ ವಿಂಡೀಸ್​ ತಂಡದ ಚುಕ್ಕಾಣಿ ರಿಚರ್ಡ್ಸ್ ಕೈಗೆ ಆಗಷ್ಟೇ ಹಸ್ತಾಂತರವಾಗಿತ್ತು.
ಇಂಗ್ಲೆಂಡ್​ ಸ್ಪಿನ್ನರ್ ಜಾನ್​ ಎಂಬುರಿ ಎಸೆದ ಚೆಂಡನ್ನು ರಿಚರ್ಡ್ಸ್​ ಎಲ್ಲಿಗೆ ಬಾರಿಸಿದ್ದರು ಗೊತ್ತಾ? ಆ ಸಿಕ್ಸರ್​ ಬಾಲ್​ ಸೀದಾ ಪಕ್ಕದ ಜೈಲುಕೋಣೆಯ ಮೇಲೆ ಬಿದ್ದಿತ್ತು. ಅಂದಹಾಗೆ ರಿಚರ್ಡ್ಸ್​ ಅವರ ಅಪ್ಪ ಅದೇ ಜೈಲಿನ ವಾರ್ಡನ್​ ಆಗಿ ಸೇವೆ ಸಲ್ಲಿಸಿದ್ದರು.
ಪ್ರವಾಸೀ ಇಂಗ್ಲೆಂಡ್​ ತಂಡಕ್ಕೆ 401 ರನ್​ಗಳ ಭಾರಿ ಸವಾಲನ್ನು ಒಡ್ಡಿತ್ತು. ಮಾಲ್ಕಂ ಮಾರ್ಷಲ್, ಜೋಯಲ್​ ಗಾರ್ನರ್, ಮೈಕೇಲ್​ ಹೋಲ್ಡಿಂಗ್​ ಎಂಬ ದೈತ್ಯ ವೇಗಿಗಳು ಜೊತೆಗೆ, ರೋಜರ್​ ಹಾರ್ಪರ್​ ಎಂಬ ಆಫ್​ ಸ್ಪಿನ್ನರ್​​ನನ್ನು ಎದುರಿಸುವುದು ಡೇವಿಡ್​ ಗೋವರ್​ ನಾಯಕತ್ವದ ಇಂಗ್ಲೆಂಡ್​ ತಂಡಕ್ಕೆ ಭಾರೀ ಸವಾಲು ಆಗಿತ್ತು. ರೋಜರ್​ ಹಾರ್ಪರ್​ ಮೂರು ವಿಕೆಟ್​ ಕಬಳಿಸಿದ್ದರೆ ಉಳಿದಿಬ್ಬರು ವೇಗಿಗಳು ತಲಾ ಎರಡು ವಿಕೆಟ್​ ಪಡೆದುಕೊಂಡಿದ್ದರು. ಇಂಗ್ಲೆಂಡ್​ ತಂಡ 79.1 ಓವರ್​ನಲ್ಲಿ 170 ರನ್​ಗೆ ಆಲೌಟ್​ ಆಗಿತ್ತು. ಪ್ರವಾಸದ ಆ ಕೊನೆಯ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ತಂಡ 240 ರನ್​ಗಳ ಹೀನಾಯ ಸೋಲು ಕಂಡಿತ್ತು. 5-0 ಅಂತರದಲ್ಲಿ ವೆಸ್ಟ್​ ಇಂಡೀಸ್​ ಪಡೆ ಆ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.

ಸರಣಿಯ ಆರಂಭದಲ್ಲಿ ಮೈಕ್​ ಗ್ಯಾಟಿಂಗ್ ಮೂಗು ಅಪ್ಪಚ್ಚಿಯಾಗಿತ್ತು

!Mike Gatting briken nose by malcom marshall

ಸರಣಿಯ ಆರಂಭದಲ್ಲಿ ಮಾಲ್ಕಂ ಮಾರ್ಷಲ್​ ಎಸೆತದಲ್ಲಿ ಮೈಕ್​ ಗ್ಯಾಟಿಂಗ್ ಮೂಗು ಅಪ್ಪಚ್ಚಿಯಾಗಿತ್ತು!
80ರ ದಶಕದ ಕ್ರಿಕೆಟ್​ ಅದರಲ್ಲೂ ವಿಂಡೀಸ್​ ಮತ್ತು ಇಂಗ್ಲೆಂಡ್​ ತಂಡಗಳ ಆಟ ರಣರೋಚಕವಾಗಿತ್ತು. ಇದೇ 1985-86ನೇ ಸಾಲಿನ ಸರಣಿಯಲ್ಲಿ ಟೆಸ್ಟ್​ಗೂ ಮುನ್ನ ಏಕದಿನ ಪಂದ್ಯಗಳಲ್ಲಿ ಮಾಲ್ಕಂ ಮಾರ್ಷಲ್​ ಎಂಬ ಅಜಾನುಬಾಹು ಬೌಲರ್​ ಎಸೆದ ಚೆಂಡೊಂದು ಇಂಗ್ಲೆಂಡ್​ ತಂಡದ ಆಕರ್ಷಕ ಬ್ಯಾಟ್ಸ್​ಮನ್​ ಮೈಕ್​ ಗ್ಯಾಟಿಂಗ್​ ಮೂಗಿಗೆ ಬಡಿದು, ಆತನ ಮೂಗಿನಿಂದ ಲೊಳಲೊಳನೆ ಸುರಿದ ರಕ್ತ ಪಿಚ್​ ಅನ್ನು ಒದ್ದೆ ಮಾಡಿತ್ತು! ಆ ಮೇಲೆ ಆತ ನಾಲ್ಕಾರು ಹೊಲಿಗೆ ಹಾಕಿಸಿಕೊಂಡಿದ್ದ.
ರಿಚರ್ಡ್ಸ್​ ತಮ್ಮ ಟೆಸ್ಟ್​ ಜೀವಿತಾವಧಿಯಲ್ಲಿ 121 ಪಂದ್ಯಗಳಲ್ಲಿ 8,540 ರನ್​ ಕಲೆ ಹಾಕಿದ್ದರು. ಇನ್ನು ಏಕದಿನ ಪಂದ್ಯಗಳಲ್ಲಿ ಸರಾಸರಿ 47 ರನ್​ನಂತೆ 6,721 ರನ್​ ಬಾರಿಸಿದ್ದರು.

Source: Tv9Kannada