ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಹೊಸ ಎಕ್ಸ್ಟರ್ ಮೈಕ್ರೊ ಎಸ್ ಯುವಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಜೊತೆಗೆ ಅತ್ಯುತ್ತಮವಾದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದೆ.

Hyundai Exter: ಎಕ್ಸ್‌ಟರ್ ಕಾರು ಉತ್ಪಾದನೆಗೆ ಚಾಲನೆ ನೀಡಿದ ಹ್ಯುಂಡೈ
 

ಪ್ರಯಾಣಿಕ ಕಾರು ಮಾರಾಟದಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ(Hyundai) ಕಂಪನಿಯು ಶೀಘ್ರದಲ್ಲಿಯೇ ಎಕ್ಸ್‌ಟರ್ ಮೈಕ್ರೊ ಎಸ್ ಯುವಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಹೊಸ ಎಕ್ಸ್‌ಟರ್(Exter) ಕಾರು ಮಾದರಿಯು ಈ ಹಿಂದಿನ ಸ್ಯಾಂಟ್ರೊ ಕಾರಿನ ಸ್ಥಾನ ತುಂಬಲಿದ್ದು, ಇದು ವಿನೂತನ ವೈಶಿಷ್ಟ್ಯತೆಗಳೊಂದಿಗೆ ಟಾಟಾ ಪಂಚ್ ಮೈಕ್ರೊ ಎಸ್ ಯುವಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಕಾರು ಖರೀದಿಗಾಗಿ ಈಗಾಗಲೇ ಬುಕಿಂಗ್ ಆರಂಭಿಸಿರುವ ಹ್ಯುಂಡೈ ಕಂಪನಿಯು ಚೆನ್ನೈ ಹೊರವಲಯದಲ್ಲಿರುವ ಉತ್ಪಾದನಾ ಘಟಕದಲ್ಲಿ ಇದೀಗ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೀಗಾಗಿ ಹೊಸ ಕಾರು ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರಿನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಜೊತೆಗೆ ಅತ್ಯುತ್ತಮವಾದ ಸುರಕ್ಷಾ ಸೌಲಭ್ಯಗಳನ್ನು ಸಹ ಜೋಡಣೆ ಮಾಡಿದೆ.

ಸ್ಯಾಂಟ್ರೋ ಸ್ಥಗಿತ ನಂತರ ಸಣ್ಣ ಕಾರುಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಹ್ಯುಂಡೈ ಕಂಪನಿಯು ಇದೀಗ ಎಕ್ಸ್‌ಟರ್ ಕಾರಿನ ಮೇಲೆ ಹೊಸ ನೀರಿಕ್ಷೆಯಿಟ್ಟುಕೊಂಡಿದ್ದು, ಇದು ಟಾಟಾ ಮೋಟಾರ್ಸ್ ಜೊತೆಗಿನ ಮಾರಾಟ ಪೈಪೋಟಿ ಎದುರಿಸಲು ಸಹಕಾರಿಯಾಗಲಿದೆ.

ಹೊಸ ಎಕ್ಸ್‌ಟರ್ ಕಾರು ಒಟ್ಟು ಐದು ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಇದು 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಆವೃತ್ತಿಗಳನ್ನು ಒಳಗೊಂಡಿದೆ. ಹೊಸ ಕಾರಿನಲ್ಲಿರುವ 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, 82 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿರಲಿದೆ.

ಮೈಕ್ರೊ ಎಸ್ ಯುವಿ ವಿನ್ಯಾಸ ಹೊಂದಿರುವ ಹೊಂದಿರುವ ಹೊಸ ಕಾರು ಉತ್ತಮ ಚಾಲನಾ ಅನುಭವ ನೀಡುವ ವಿಶ್ವಾಸದಲ್ಲಿದ್ದು, ಬೆಸ್ ವೆರಿಯೆಂಟ್ ನಲ್ಲೂ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಜೋಡಣೆ ಹೊಂದಿದೆ. ಹೊಸ ಕಾರಿನಲ್ಲಿ ವಿವಿಧ ಫೀಚರ್ಸ್ ಗಳೊಂದಿಗೆ ಸನ್‌ರೂಫ್, 8 ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಟೆಡ್ ಕಾರ್ ಟೆಕ್, ವೈರ್‌ಲೆಸ್ ಚಾರ್ಜರ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯಗಳಿವೆ.

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹ್ಯುಂಡೈ ಕಂಪನಿಯು ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳು ಮತ್ತು ಟಿಪಿಎಂಎಸ್(ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ) ನೀಡಿದ್ದು, ಇದರ ಜೊತೆಗೆ ಅತ್ಯುತ್ತಮ ನೋಟ ಹೊಂದಿರುವ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಐಸೋ ಫೀಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿ ಹಲವು ಸುರಕ್ಷಾ ಸೌಲಭ್ಯಗಳಿವೆ. ಈ ಮೂಲಕ ಹೊಸ ಎಕ್ಸ್‌ಟರ್ ಕಾರು ಟಾಟಾ ಪಂಚ್ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಇದು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 6 ಲಕ್ಷದಿಂದ ರೂ. 11 ಲಕ್ಷ ಬೆಲೆ ಹೊಂದಿರುವ ಸಾಧ್ಯತೆಯಿದೆ.

Source: TV9 Kannada

 
 
 

Hyundai Exter: ಎಕ್ಸ್‌ಟರ್ ಕಾರು ಉತ್ಪಾದನೆಗೆ ಚಾಲನೆ ನೀಡಿದ ಹ್ಯುಂಡೈ

Jun 26, 2023