HBD Ashika Ranganath: ನೀವಂದುಕೊಂಡಂತೆ ಇಲ್ಲ ಆಶಿಕಾ ರಂಗನಾಥ್; ಬರ್ತ್ಡೇ ದಿನವೇ ಬಯಲಾಯ್ತು ಇನ್ನೊಂದು ಮುಖ
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಆಶಿಕಾ ರಂಗನಾಥ್ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತದೆ. ಈಗಾಗಲೇ ಹಲವು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಅವರ ಕೈಯಲ್ಲಿ ಸದ್ಯ ಅನೇಕ ಆಫರ್ಗಳಿವೆ. ಚಂದನವನದ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಅವರು ಮುಂದುವರಿಯುತ್ತಿದ್ದಾರೆ. ಇಂದು (ಆ.5) ಅವರಿಗೆ ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಆಶಿಕಾ ನಟಿಸುತ್ತಿರುವ ‘ಮದಗಜ’ ಸಿನಿಮಾದಿಂದ ಅವರ ಒಂದು ಹೊಸ ಪೋಸ್ಟರ್ ರಿಲೀಸ್ ಆಗಿದ್ದು ಅಚ್ಚರಿ ಮೂಡಿಸುವಂತಿದೆ. ಅದರಲ್ಲಿ ಆಶಿಕಾ ರಂಗನಾಥ್ ಸಿಗರೇಟ್ ಸೇದುತ್ತ ಶಾಕ್ ನೀಡಿದ್ದಾರೆ!
ಹೌದು, ಇಷ್ಟು ದಿನ ಆಶಿಕಾ ರಂಗನಾಥ್ ಅವರು ಈ ರೀತಿ ಕಾಣಿಸಿಕೊಂಡಿರಲಿಲ್ಲ. ಗ್ಲಾಮರಸ್ ಆಗಿದ್ದರೂ ಕೂಡ ಮುಗ್ಧ ಹುಡುಗಿಯ ಲುಕ್ನಲ್ಲಿ ಮನಸೆಳೆಯುತ್ತಿದ್ದ ಅವರು ಈಗ ಏಕಾಏಕಿ ಬೋಲ್ಡ್ ಆಗಿದ್ದಾರೆ. ಈ ಮೊದಲು ಮದಗಜ ತಂಡ ಬಿಡುಗಡೆ ಮಾಡಿದ್ದ ಪೋಸ್ಟರ್ನಲ್ಲಿ ಅವರು ಹಳ್ಳಿ ಹುಡುಗಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಪಕ್ಕಾ ಮಾಡರ್ನ್ ಹುಡುಗಿ ವೇಷ ತಾಳಿದ್ದಾರೆ. ಅಲ್ಲದೇ, ಬಿಂದಾಸ್ ಆಗಿ ಸಿಗರೇಟು ಸೇದುತ್ತಿರುವ ಈ ಫೋಸ್ಟರ್ ನೋಡಿ ಸ್ವತಃ ಅವರ ಅಭಿಮಾನಿಗಳು ಅಚ್ಚರಿ ಪಡುವಂತಾಗಿದೆ.
‘ಮದಗಜ’ ಚಿತ್ರಕ್ಕೆ ‘ಅಯೋಗ್ಯ’ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ‘ರೋರಿಂಗ್ ಸ್ಟಾರ್’ ಶ್ರೀಮುರಳಿ ನಟನೆಯ ಈ ಸಿನಿಮಾ ಮೇಲೆ ಸಿನಿಪ್ರಿಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟೀಸರ್ಗಳ ಮೂಲಕ ಈ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಆಶಿಕಾ ಅವರ ಈ ಹೊಸ ಪೋಸ್ಟರ್ ಅನಾವರಣಗೊಂಡಿದೆ.
ಕೊರೊನಾ ಹಾವಳಿ ಇರುವ ಕಾರಣ ಇಂದು ಆಶಿಕಾ ರಂಗನಾಥ್ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ‘ಪ್ರಸ್ತುತ ಪರಿಸ್ಥಿತಿ ಮತ್ತು ನನ್ನ ಚಿತ್ರೀಕರಣ ವೇಳಾಪಟ್ಟಿಯಿಂದಾಗಿ ನಿಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲ. ನಿಮ್ಮ ಭೇಟಿಯಾಗದೇ ಇರುವುದು ಮತ್ತು ಈ ವಿಶೇಷ ದಿನವನ್ನು ನಿಮ್ಮೆಲ್ಲರೊಂದಿಗೆ ಆಚರಿಸದೇ ಇರುವುದು ನನಗೆ ತುಂಬಾ ದುಃಖ ತಂದಿದೆ. ಆದರೆ ಅದು ಎಲ್ಲರ ಆರೋಗ್ಯ ಮತ್ತು ಸುರಕ್ಷತೆಗಾಗಿ’ ಎಂದು ಅವರು ತಿಳಿಸಿದ್ದಾರೆ.
Source: Tv9 kannada