Electric Vehicles: ಪೆಟ್ರೋಲ್​, ಡೀಸೆಲ್​ ವಾಹನ ಬದಲು ಎಲೆಕ್ಟ್ರಿಕ್​ ವಾಹನ ಬಳಸಿದರೆ ಭಾರಿ ಹಣ ಉಳಿತಾಯ ಆಗುತ್ತೆ: ನಿತಿನ್​ ಗಡ್ಕರಿ

Feb 20, 2021

Electric Vehicle: ದೆಹಲಿಯಲ್ಲಿ 10 ಸಾವಿರ ವಿದ್ಯುತ್​ ಚಾಲಿತ ವಾಹನಗಳನ್ನು ಬಳಸಲು ಆರಂಭಿಸಿದರೆ ತಿಂಗಳಿಗೆ ಒಟ್ಟಾರೆ ಸುಮಾರು ₹30 ಕೋಟಿ ಉಳಿತಾಯ ಮಾಡಬಹುದು. ಇಂಧನದ ಮೇಲೆ ವ್ಯಯಿಸುವ ಹಣ ಉಳಿತಾಯ ಆಗುವ ಜೊತೆಗೆ ವಾಹನಗಳಿಂದ ಹೊರಹೊಮ್ಮಿ ಪರಿಸರಕ್ಕೆ ಹಾನಿ ಮಾಡುವ ಹೊಗೆಯನ್ನೂ ತಡೆಗಟ್ಟಬಹುದು.

ದೇಶದಲ್ಲಿ ದಿನೇದಿನೇ ಇಂಧನ ಬೆಲೆ ಗಗನಮುಖಿಯಾಗಿ ಸಾಗುತ್ತಿದೆ. ಈಗಾಗಲೇ ಕೆಲ ನಗರಗಳಲ್ಲಿ ಒಂದು ಲೀಟರ್​ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ಅಂಕೆಯಿಲ್ಲದೇ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಕಂಡು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಮಾತುಗಳನ್ನಾಡಿದ್ದಾರೆ. ಇಂಧನಗಳ ಮೇಲೆ ವ್ಯಯಿಸುತ್ತಿರುವ ಹಣ ಉಳಿತಾಯ ಮಾಡುವುದಕ್ಕೆ ಹಾಗೂ ವಾಯುಮಾಲಿನ್ಯ ನಿಯಂತ್ರಿಸುವುದಕ್ಕೆ ವಿದ್ಯುತ್ ಚಾಲಿತ ವಾಹನಗಳು ಸಹಕಾರಿಯಾಗಲಿವೆ. ಹೀಗಾಗಿ ನಮ್ಮ ಇಲಾಖೆಯ ಎಲ್ಲಾ ಅಧಿಕಾರಿಗಳೂ ವಿದ್ಯುತ್ ಶಕ್ತಿಯ ಸಹಾಯದಿಂದ ಚಲಿಸುವ ವಾಹನಗಳನ್ನೇ ಬಳಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನಿತಿನ್ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ 10 ಸಾವಿರ ವಿದ್ಯುತ್​ ಚಾಲಿತ ವಾಹನಗಳನ್ನು ಬಳಸಲು ಆರಂಭಿಸಿದರೆ ತಿಂಗಳಿಗೆ ಒಟ್ಟಾರೆ ಸುಮಾರು ₹30 ಕೋಟಿ ಉಳಿತಾಯ ಮಾಡಬಹುದು. ಇಂಧನದ ಮೇಲೆ ವ್ಯಯಿಸುವ ಇಷ್ಟು ದೊಡ್ಡ ಮಟ್ಟದ ಹಣ ಉಳಿತಾಯ ಆಗುವ ಜೊತೆಗೆ ವಾಹನಗಳಿಂದ ಹೊರಹೊಮ್ಮಿ ಪರಿಸರಕ್ಕೆ ಹಾನಿ ಮಾಡುವ ಹೊಗೆಯನ್ನೂ ತಡೆಗಟ್ಟಬಹುದು. ಇದಕ್ಕಾಗಿ ನಾವು ವಿದ್ಯುತ್ ಶಕ್ತಿಯ ಸಹಾಯದಿಂದ ಚಲಿಸುವ ವಾಹನಗಳ ಬಳಕೆಗೆ ಹೆಚ್ಚು ಒತ್ತು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪೆಟ್ರೋಲ್​ ದರ ₹93.61
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್​ಗೆ ₹93.61ಕ್ಕೆ ಏರಿಕೆ ಕಂಡಿದೆ. ಆ ಮೂಲಕ ಶತಕದತ್ತ ಸಾಗುವ ಮುನ್ಸೂಚನೆ ಸಿಕ್ಕಿದೆ. ಕ್ರಿಕೆಟ್​​ ಆಟದಲ್ಲಿ ಶತಕವೆಂದರೆ ಸಂಭ್ರಮಿಸಬಹುದು. ಆದರೆ ದೈನಂದಿನ ಬದುಕಿನಲ್ಲಿ ಈ ಪರಿಯ ಶತಕ ಗ್ರಾಹಕರನ್ನು ನಿರಾಶೆ ಮತ್ತು ಆಕ್ರೋಶದ ಮಡುವಿಗೆ ದೂಡಿದೆ. ಈ ನಡುವೆ ತೈಲೋತ್ಪನ್ನಗಳ ದರ ಏರಿಕೆಗೆ ಕಡಿವಾಣ ಹಾಕುವ ಬದಲು, ಅವುಗಳ ಬಳಕೆಗೆ ಕಡಿವಾಣ ಹಾಕುವುದು ಮತ್ತು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದಷ್ಟೇ ಇದಕ್ಕೆ ಪರಿಹಾರ ಎಂಬ ಧಾಟಿಯಲ್ಲಿ ಕೇಂದ್ರ ಸರ್ಕಾರ ಮಾತನಾಡಿದೆ. ಅದರ ಬೆನ್ನಲ್ಲೇ ಸಚಿವ ನಿತಿನ್ ಗಡ್ಕರಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಮಾತುಗಳನ್ನಾಡಿದ್ದಾರೆ.

 

Source: TV9Kannada