Corona Vaccine Shortage: ಕೊವಿಡ್ ಲಸಿಕೆ ಸಿಗದೆ ರೊಚ್ಚಿಗೆದ್ದ ಸಾರ್ವಜನಿಕರು, ಹಾಸನ ಡಿಸಿ ಮನೆಗೆ ಮುತ್ತಿಗೆ

Aug 6, 2021

ಹಾಸನ: ಕರ್ನಾಟಕ ರಾಜ್ಯದಿಂದ ಜಿಲ್ಲೆಗಳಿಗೆ ಅಗತ್ಯವಿರುವಷ್ಟು ಕೊರೊನಾ ಲಸಿಕೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಜಿಲ್ಲೆಗಳಲ್ಲಿ ಲಸಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗೂ ಲಸಿಕೆ ಪಡೆಯಲು ಜನ ತಿಂಗಳುಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ರೆ ಹಾಸನದಲ್ಲಿ ಕೊವಿಡ್ ಲಸಿಕೆ ಸಿಗದಿದ್ದದಕ್ಕೆ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ.

ಸರಿಯಾದ ಸಮಯಕ್ಕೆ ಲಸಿಕೆ ಸಿಗಲಿಲ್ಲ ಎಂದು ಬೇಸರಗೊಂಡ ಸಾರ್ವಜನಿಕರು ಹಾಸನ ಡಿಸಿ ಮನೆಗೆ ಮುತ್ತಿಗೆ ಹಾಕಿದ್ದಾರೆ. ನೂರಾರು ಜನರ ಗುಂಪು ಹಾಸನ ಡಿಸಿ ನಿವಾಸಕ್ಕೆ ಆಗಮಿಸಿ ಮುತ್ತಿಗೆ ಹಾಕಿ ಕೊವಿಡ್ ಲಸಿಕೆ ನೀಡುವಂತೆ ಆಗ್ರಹಿಸಿದ್ದಾರೆ. ಲಸಿಕಾ ಕೇಂದ್ರದ ಸಿಬ್ಬಂದಿ ಇಂದು ಲಸಿಕೆ ಪಡೆಯಲು ನಿನ್ನೆ ಟೋಕನ್ ನೀಡಿದ್ದರು. ಆದ್ರೆ ಇಂದು ಲಸಿಕಾ ಕೇಂದ್ರಕ್ಕೆ ಹೋದರೆ ಲಸಿಕೆ ಇಲ್ಲ ಎನ್ನುತ್ತಿದ್ದಾರೆ. ಪ್ರತಿದಿನ ಲಸಿಕೆಗಾಗಿ ಕಾದುಕಾದು ಸುಸ್ತಾಗಿದೆ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಲಸಿಕಾ ಕೇಂದ್ರದ ಮುಂದೆ ಕ್ಯೂ ನಿಂತ ಜನ

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣ ಲಸಿಕೆ ಬರುತ್ತಿಲ್ಲ. ಹೀಗಾಗಿ ಲಸಿಕೆ ಸಮಸ್ಯೆ ಎದುರಾಗಿದೆ. ಅದರಲ್ಲೂ ಮೂರನೇ ಅಲೆ ಎದುರಾಗುವ ಭೀತಿಯಲ್ಲಿರುವ ಜನ ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಇಲ್ಲದ ಕಾರಣ ಪ್ರತಿನಿತ್ಯ ಜನ ಕೇಂದ್ರಕ್ಕೆ ಬಂದು ಹೋಗುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನು ಜಿಲ್ಲೆಯಲ್ಲಿ 18 ವರ್ಷದವರು 14 ಲಕ್ಷ ಮಂದಿ ಇದ್ದು ಲಸಿಕೆ ಕೊರೆತಯಿಂದಾಗಿ ಕೇವಲ ಸೆಕೆಂಡ್ ಡೋಸ್ ಲಸಿಕೆ ಮಾತ್ರ ನೀಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಗೆ ಕೋವಿಡ್ ಶೀಲ್ಡ್ ಲಸಿಕೆ ಪೂರೈಕೆಯಾಗುತ್ತಿಲ್ಲ. ಕಡಿಮೆ ಲಸಿಕೆ ಇರುವುದರಿಂದ ಕಾದು ಕಾದು ಹಿಂತಿರುಗುತ್ತಿರುವ ಜನ ಆಕ್ರೋಶಗೊಂಡಿದ್ದಾರೆ. ನಿನ್ನೆ ಕೂಡ ಡಿಸಿ ಕಚೇರಿ ಎದುರು ಜನ ಪ್ರತಿಭಟನೆ ಮಾಡಿದ್ದರು. ಇಂದು ಡಿಸಿ ನಿವಾಸದ ಬಳಿ ಪ್ರತಿಭಟನೆ ಮಾಡಿದ್ದಾರೆ.

ಸದ್ಯ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಡಿಸಿ ತಿಳಿಸಿದ್ದಾರೆ. ಹಾಗೂ ಮೊದಲ ಹಂತದ ಲಸಿಕೆ ಕೂಡ ಆರಂಭಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಬಂದಿದ್ದ ಸಾರ್ವಜನಿಕರು ಹಿಂತಿರುಗಿದ್ದಾರೆ.

 

Source: Tv9 kannada