Tokyo Olympics: ಒಲಿಂಪಿಕ್ಸ್ ಹಾಕಿ ಇತಿಹಾಸದಲ್ಲಿ ಚೊಚ್ಚಲ ಪದಕ ಗೆಲ್ಲುವ ಭಾರತೀಯ ಮಹಿಳೆಯರ ಕನಸು ಭಗ್ನ

Aug 6, 2021

ಒಲಿಂಪಿಕ್ಸ್ (Olympics) ಇತಿಹಾಸದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ (India Womens Hockey Team) ಚೊಚ್ಚಲ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಕಂಚಿನ ಪದಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಣಿ ಪಡೆ 3-4 ಗೋಲುಗಳ ಅಂತರದಲ್ಲಿ ಸೋಲು ಕಂಡಿದ್ದು, ಭಾರತಕ್ಕೆ ಆರನೇ ಪದಕ ಕೈತಪ್ಪಿದೆ. ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲಿ ಚೊಚ್ಚಲ ಪದಕಕ್ಕೆ ಕೊರಳೊಡ್ಡುವ ಭಾರತ ಮಹಿಳಾ ಹಾಕಿ ತಂಡದ ಆಸೆ ಈಡೇರಲಿಲ್ಲ.

ಪಂದ್ಯ ಆರಂಭವಾದ ಮೊದಲ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, ಎರಡನೇ ಕ್ವಾರ್ಟರ್​ನ ಆರಂಭದಲ್ಲಿ ಭಾರತೀಯರು ಮಾಡಿದ ತಪ್ಪಿನಿಂದ ಬ್ರಿಟನ್ ಖಾತೆ ತೆರೆಯಿತು. ಇದರ ಬೆನ್ನಲ್ಲೆ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಇದರ ನಡುವೆ ಬ್ರಿಟನ್ ಮತ್ತೊಂದು ಗೋಲು ದಾಖಲಿಸಿ 2-0 ಮುನ್ನಡೆ ಸಾಧಿಸಿತು. ಎರಡನೇ ಕ್ವಾರ್ಟರ್ ಅಂತ್ಯದ ವೇಳೆಗೆ ಭರ್ಜರಿ ಕಮ್​ಬ್ಯಾಕ್ ಮಾಡಿದ ಭಾರತ ಪೆನಾಲ್ಟಿ ಕಾರ್ನರ್​ನಲ್ಲಿ ಗುರುಜಿತ್ ಕೌರ್ ಎರಡು ಬಾರಿ ಚೆಂಡನ್ನು ನೆಟ್​ನೊಳಗೆ ಅಟ್ಟಿ ಸಮಬಲ ಸಾಧಿಸಿದರು. ಮತ್ತೊಮ್ಮೆ ವಂದನಾ ಅವರು ತಮ್ಮ ಚಾಣಕ್ಷತನದಿಂದ ಗೋಲು ದಾಖಲಿಸಿ 3-2 ರ ಮುನ್ನಡೆ ಸಾಧಿಸುವಂತೆ ಮಾಡಿದರು.

 

Source: Tv9 kannada