Rachita Ram: ಫೈಟರ್ ವಿವೇಕ್ ಸಾವಿಗೆ ಸಂಬಂಧಪಟ್ಟಂತೆ ಇಂದು ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಲಿರುವ ರಚಿತಾ ರಾಮ್
ಲವ್ ಯೂ ರಚ್ಚು ಚಿತ್ರದ ವೇಳೆ ಫೈಟರ್ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸ್ಯಾಂಡಲ್ವುಡ್ ಖ್ಯಾತ ನಟಿ, ಚಿತ್ರದ ನಾಯಕಿ ರಚಿತಾ ರಾಮ್ ವಿಚಾರಣೆಗೆ ಹಾಜರಾಗಲಿದ್ದಾರೆ. ಇಂದು(ಆಗಸ್ಟ್ 24) ಸಂಜೆ 6 ಗಂಟೆಗೆ ಬಿಡದಿ ಠಾಣೆಗೆ ಹಾಜರಾಗಿ ಅವರು ಹೇಳಿಕೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 9 ರಂದು ‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿತ್ತು. ರಾಮನಗರ ತಾಲೂಕಿನ ಜೋಗನಪಾಳ್ಯ ಗ್ರಾಮದ ಬಳಿ ಚಿತ್ರೀಕರಣದ ಸಂದರ್ಭದಲ್ಲಿ ಕ್ರೇನ್, 11 ಕೆವಿ ವಿದ್ಯುತ್ ತಂತಿಗೆ ತಗುಲಿ ಫೈಟರ್ ವಿವೇಕ್(27)ಸಾವನ್ನಪ್ಪಿದ್ದರು. ಅಲ್ಲದೆ ತಂಡದ ಮತ್ತೊಬ್ಬ ರಂಜಿತ್ ಎಂಬುವವರಿಗೂ ಗಂಭೀರ ಗಾಯವಾಗಿತ್ತು. ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಚಿತ್ರದ ನಿರ್ದೇಶಕ ಶಂಕರಯ್ಯ, ನಿರ್ಮಾಪಕ ಗುರುದೇಶ್ ಪಾಂಡೆ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಮ್ಯಾನೇಜರ್ ಫರ್ನಾಂಡೀಸ್, ಕ್ರೇನ್ ಆಪರೇಟರ್ ಮಹದೇವ್ ವಿರುದ್ಧ ಬಿಡದಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇವರಲ್ಲಿ ಶಂಕರಯ್ಯ, ವಿನೋದ್ ಕುಮಾರ್ ಹಾಗೂ ಮಹದೇವ್ ಬಂಧನವಾಗಿದೆ. ಚಿತ್ರದ ನಿರ್ಮಾಪಕ ಗುರುದೇಶ್ ಪಾಂಡೆ ಹಾಗೂ ಫರ್ನಾಂಡೀಸ್ ತಲೆ ಮರೆಸಿಕೊಂಡಿದ್ದಾರೆ. ಈ ಘಟನೆಯ ಸಂಬಂಧ ಹೇಳಿಕೆ ನೀಡುವಂತೆ ರಚಿತಾ ರಾಮ್ ಅವರಿಗೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಇಂದು ಠಾಣೆಗೆ ಹಾಜರಾಗಲಿರುವ ರಚಿತಾ, ತಮ್ಮ ಹೇಳಿಕೆಗಳನ್ನು ದಾಖಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಪ್ರಕರಣದ ಕುರಿತು ಆರೋಪಗಳಿಗೆ ಮೌನ ಮುರಿದಿದ್ದ ರಚಿತಾ:
ಫೈಟರ್ ವಿವೇಕ್ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಚಿತಾ ರಾಮ್ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಈ ಕುರಿತಂತೆ ರಚಿತಾ ಇನ್ಸ್ಟಾಗ್ರಾಂನಲ್ಲಿ ಒಂದು ದೀರ್ಘ ಪೋಸ್ಟ್ನಲ್ಲಿ ಉತ್ತರ ಬರೆದು, ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದರು. ‘ಎಲ್ಲರಿಗೂ ನಮಸ್ಕಾರ. ನೀವೆಲ್ಲರೂ ಕ್ಷೇಮವಾಗಿದ್ದೀರಿ ಅಂತ ನಂಬಿದ್ದೇನೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಅಂತ ನಾನು ರಿಕ್ವೆಸ್ಟ್ ಮಾಡ್ತೀನಿ. ಲವ್ ಯೂ ರಚ್ಚು ಸಿನಿಮಾ ಸೆಟ್ನಲ್ಲಿ ಒಂದು ನಡೆಯಬಾರದ ಘಟನೆ ನಡೆದಾಗಿನಿಂದ ಆ ಆಘಾತ ನನ್ನನ್ನು ಸೈಲೆಂಟ್ ಆಗಿರುವಂತೆ ಮಾಡಿತ್ತು. ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ. ತಪ್ಪಾಗಿ ಬಳಕೆ ಆಗ್ತಾ ಇದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ’ ಎಂದು ರಚಿತಾ ರಾಮ್ ಬರೆದುಕೊಂಡಿದ್ದರು.
‘ದುರ್ಘಟನೆ ನಡೆದಾಗ ನಾನು ಸೆಟ್ನಲ್ಲಿ ಇರಲಿಲ್ಲ. ಅದಂತೂ ಸತ್ಯ. ಆಗಸ್ಟ್ 2ನೇ ತಾರೀಕಿನಿಂದ ನಾನು ‘ಶಬರಿ’ ಸಿನಿಮಾ ಶೂಟಿಂಗ್ಗೋಸ್ಕರ ಮೈಸೂರಿನಲ್ಲಿದ್ದೆ. ಸತ್ಯವನ್ನು ಒಂದೇ ಒಂದು ಸಲ ಪುನರ್ ಪರಿಶೀಲಿಸಿದ್ರೆ ನನ್ನ ಬಗ್ಗೆ ಕೆಟ್ಟ ಕಮೆಂಟ್ಗಳನ್ನು ಬರೆಯುವ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿಬರುತ್ತಿರಲಿಲ್ಲ ಎನಿಸುತ್ತೆ’ ಎಂದು ರಚಿತಾ ಹೇಳಿದ್ದರು.
‘ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ. ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಎನ್ನುವ ನೋವು ನನ್ನನ್ನು ಕಾಡ್ತಿದೆ. ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಭಗವಂತ ನೀಡಲಿ ಅಂತ ನಾನು ಬೇಡಿಕೊಳ್ತೀನಿ. ನನ್ನ ಬೆಳೆಸಿರುವ ಜನರು ನನ್ನ ಮಾತುಗಳನ್ನು, ನನ್ನನ್ನು ನಂಬುತ್ತಾರೆ ಅಂತ ನಂಬಿದ್ದೇನೆ. ಆರೋಪಗಳು ಏನೇ ಇದ್ರೂ, ಸರಿ-ತಪ್ಪುಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ ಅಂತಾನೂ ನಂಬಿದ್ದೇನೆ’ ಎಂದು ರಚಿತಾ ಪೋಸ್ಟ್ ಮಾಡಿದ್ದರು. ಇದೀಗ ಠಾಣೆಗೆ ಹಾಜರಾಗಲಿರುವ ರಚಿತಾ ರಾಮ್, ಈ ವಿಚಾರಗಳನ್ನು ಹೇಳಿಕೆಯ ಮುಖಾಂತರ ದಾಖಲಿಸುವ ಸಾಧ್ಯತೆ ಇದೆ.
Source:tv9 Kannada