Anandha Kannan: ಖ್ಯಾತ ನಿರೂಪಕ, ನಟ ಆನಂದ ಕಣ್ಣನ್ ಕ್ಯಾನ್ಸರ್ನಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ
ತಮಿಳು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ, ನಿರೂಪಕ ಆನಂದ ಕಣ್ಣನ್ (Anandha Kannan) ಅವರು ಸೋಮವಾರ (ಆ.16) ನಿಧನರಾದರು. ಈ ಸುದ್ದಿ ಅವರ ಅಭಿಮಾನಿಗಳಿಗೆ ಕಂಬನಿ ತರಿಸಿದೆ. 48ರ ಪ್ರಾಯದ ಆನಂದ ಕಣ್ಣನ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹಲವು ತಿಂಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಆನಂದ ಕಣ್ಣನ್ ಮೃತರಾದ ಸುದ್ದಿಯನ್ನು ಖಚಿತಪಡಿಸಿದ್ದಾರೆ.
‘ಒಬ್ಬ ಅತ್ಯುತ್ತಮ ಗೆಳಯ, ಒಳ್ಳೆಯ ವ್ಯಕ್ತಿ ಆನಂದ ಕಣ್ಣನ್ ಇನ್ನಿಲ್ಲ. ಅವರ ನಿಧನಕ್ಕೆ ನನ್ನ ಸಂತಾಪಗಳು. ಆನಂದ ಕಣ್ಣನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ವೆಂಕಟ್ ಪ್ರಭು ಟ್ವೀಟ್ ಮಾಡಿದ್ದಾರೆ. ನಿರ್ಮಾಪಕ ಆರ್.ಕೆ. ಸುರೇಶ್, ನಟ ಸೆಂಥಿಲ್ ಕುಮಾರ್ ಸೇರಿದಂತೆ ಕಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಂಡಿದ್ದ ಆನಂದ ಕಣ್ಣನ್ ಅವರು ಕೇವಲ 48ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳುವಂತಾಗಿದ್ದು ನಿಜಕ್ಕೂ ನೋವಿನ ಸಂಗತಿ.
ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಆನಂದ ಕಣ್ಣನ್ ಅವರು ಮನರಂಜನಾ ವಾಹಿನಿಗಳಲ್ಲಿ ನಿರೂಪಕರಾಗಿ ಹೆಚ್ಚು ಫೇಮಸ್ ಆಗಿದ್ದರು. ಆ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸಿಂಗಾಪುರ್ ವಸಂತಂ ವಾಹಿನಿಯಲ್ಲಿ ಆ್ಯಂಕರ್ ಆಗಿ ಅವರು ವೃತ್ತಿ ಜೀವನ ಆರಂಭಿಸಿದ್ದರು. ನಂತರ ಚೆನ್ನೈಗೆ ಬಂದು ಸನ್ ಮ್ಯೂಸಿಕ್ ವಾಹಿನಿಯಲ್ಲಿ ವಿಡಿಯೋ ಜಾಕಿ ಆಗಿದ್ದರು. 2008ರಲ್ಲಿ ತೆರೆಕಂಡ ‘ಸರೋಜಾ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಸೈನ್ಸ್ ಫಿಕ್ಷನ್ ಕಥೆ ಹೊಂದಿದ್ದ ‘ಆಧಿಸಯ ಉಳಗಂ’ ಸಿನಿಮಾದಲ್ಲಿ ಆನಂದ ಕಣ್ಣನ್ ಮುಖ್ಯಭೂಮಿಕೆ ನಿಭಾಯಿಸಿದ್ದರು.
ಆನಂದ ಕಣ್ಣನ್ ನಟಿಸಿದ್ದ ಕೆಲವು ಸಿನಿಮಾಗಳ ಕೆಲಸಗಳು ಅರ್ಧಕ್ಕೆ ನಿಂತ ಕಾರಣ ಇನ್ನೂ ಬಿಡುಗಡೆ ಆಗಿಲ್ಲ. 2013ರಿಂದ 2018ರವರೆಗೆ ಪ್ರಸಾರವಾದ ಸವಾಲ್ ಸಿಂಗಾಪುರ್ ಕಾರ್ಯಕ್ರಮದ 5 ಸೀಸನ್ಗಳಲ್ಲೂ ಅವರು ನಿರೂಪಕರಾಗಿ ಕೆಲಸ ಮಾಡಿದ್ದರು. ಕಿರುತೆರೆ ಲೋಕದ ಹಲವು ಪ್ರಶಸ್ತಿಗಳೂ ಅವರಿಗೆ ಸಿಕ್ಕಿದ್ದವು. ಬಣ್ಣದ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡುವ ಮುನ್ನವೇ ಅವರಿಗೆ ಯಮಸ್ವರೂಪಿಯಾಗಿ ಕ್ಯಾನ್ಸರ್ ಶುರುವಾಗಿತ್ತು.
ಕ್ಯಾನ್ಸರ್ ಇದೆ ಎಂಬುದು ಗೊತ್ತಾದ ಬಳಿಕ ಆನಂದ ಕಣ್ಣನ್ ಅವರ ವೃತ್ತಿಜೀವನಕ್ಕೆ ಹಿನ್ನಡೆ ಆಗಲಾರಂಭಿಸಿತು. ಮತ್ತೆ ಅವರನ್ನು ಹೊಸದೊಂದು ಕಾರ್ಯಕ್ರಮಕ್ಕೆ ನಿರೂಪಕರನ್ನಾಗಿ ಮಾಡಲು ವಾಹಿನಿಯೊಂದು ಆಲೋಚಿಸಿತ್ತು. ಆದರೆ ಅದು ಕೈಗೂಡುವುದಕ್ಕಿಂತ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದಾರೆ.
Source: tv9 Kannada