‘ಕೊವಿಡ್​ 19 ಹೊಸ ರೂಪಾಂತರಿ ವೈರಾಣುಗಳು ಯಾವಾಗ ಬೇಕಾದರೂ ಉದ್ಭವಿಸಬಹುದು‘

Aug 11, 2021

ದೆಹಲಿ: ಕೊವಿಡ್​ 19 ಸೋಂಕಿ (Covid 19)ನ ಹೊಸ ರೂಪಾಂತರ ವೈರಸ್​ಗಳು (Covid Mutants) ಯಾವುದೇ ಸಮಯದಲ್ಲೂ ಉದ್ಭವ ಆಗಬಹುದು..ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ಅದಾಗಲೇ ಎದ್ದಿರುವ ಆಲ್ಫಾ, ಬೇಟಾ, ಗಮ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್​ ರೂಪಾಂತರಿ ವೈರಾಣುಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಆದರೆ ಕೊವಿಡ್ 19 ವೈರಸ್​ನ ಇನ್ನಷ್ಟು ರೂಪಾಂತರಿ ವೈರಾಣುಗಳು ಹುಟ್ಟುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಡಾ. ಎಸ್​.ಕೆ.ಸಿಂಗ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸದ್ಯ ಕಪ್ಪಾ ಮತ್ತು B1617.3 ರೂಪಾಂತರಿ ವೈರಾಣುಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ನಾವು ಎರಡು ವಿಧದಲ್ಲಿ ಕಣ್ಗಾವಲು ವ್ಯವಸ್ಥೆ ಮಾಡಿದ್ದೇವೆ. ದೇಶದಲ್ಲೇ ಹುಟ್ಟಿದ ಕೊವಿಡ್​ 19 ರೂಪಾಂತರವಾದ ಡೆಲ್ಟಾ ವೈರಾಣು ಮತ್ತು ಹೊರದೇಶಗಳಲ್ಲಿ ಹುಟ್ಟಿ, ನಮ್ಮ ದೇಶಕ್ಕೆ ಕಾಲಿಟ್ಟ ರೂಪಾಂತರಿ ವೈರಸ್​ಗಳೆರಡರ ಬಗ್ಗೆಯೂ ಪ್ರತ್ಯೇಕವಾಗಿ ಕಣ್ಗಾವಲು ಇಟ್ಟು, ನಿರ್ವಹಣೆ ಮಾಡಲಾಗುತ್ತಿದೆ ಎಂದು ಎಸ್​.ಕೆ.ಸಿಂಗ್​ ಹೇಳಿದ್ದಾರೆ.

ಇನ್ನು ಕೊವಿಡ್​ 19 ಸೋಂಕಿನ ಹೊಸ ರೂಪಾಂತರಿ ವೈರಾಣುಗಳು ಯಾವಾಗ ಬೇಕಾದರೂ ಹುಟ್ಟಬಹುದು..ನಮ್ಮ ದೇಶಕ್ಕೂ ಕಾಲಿಡಬಹುದು. ಕೊವಿಡ್​ 19 ಮತ್ತು ಅದರ ರೂಪಾಂತರಿಗಳ ವಿರುದ್ಧ ಹೋರಾಡಲು ಡಬ್ಲ್ಯೂಎಚ್​ಒ ಕೂಡ ಕೆಲವು ಕಾರ್ಯತಂತ್ರಗಳನ್ನು ರೂಪಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಕೇರಳದಲ್ಲಿ ಕೊರೊನಾ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇರಳಕ್ಕೆ ಕೇಂದ್ರದಿಂದ ಆರೋಗ್ಯ ತಜ್ಞರ ತಂಡವನ್ನು ಕಳಿಸಲಾಗಿದೆ. ಅಲ್ಲಿ, ಟೆಸ್ಟ್​-ಟ್ರ್ಯಾಕ್​-ಟ್ರೀಟ್​ ಎಂಬ ನಿಯಮಗಳನ್ನು ಅಳವಡಿಸಿಕೊಂಡು ಕೊವಿಡ್​ 19 ವಿರುದ್ಧ ಹೋರಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Source: tv9 kannada