500 ಕೆಜಿ ಭಾರ ಹೊತ್ತು ಸರಾಗವಾಗಿ ಹೆಜ್ಜೆ ಹಾಕಿದ ಗಜಪಡೆ ನಾಯಕ ಅಭಿಮನ್ಯು

Sep 24, 2021

ಮೈಸೂರು, ಸೆ.23(ಎಂಟಿವೈ)-ದಸರಾ ಮಹೋತ್ಸವದ ಗಜ ಪಡೆಯ ನಾಯಕ ಅಭಿಮನ್ಯುವಿಗೆ ಗುರುವಾರ 500 ಕೆಜಿ ಭಾರ ಹೊರಿಸುವ ತಾಲೀಮು ನಡೆಸಲಾಯಿತು. ಎರಡನೆ ದಿನ ತಾಲೀ ಮಿಗೆ ಮೈಯೊಡ್ಡಿದ ಅಭಿಮನ್ಯು ಲೀಲಾಜಾಲವಾಗಿ ಭಾರಹೊತ್ತು ತಾಲೀಮಿನಲ್ಲಿ ಪಾಲ್ಗೊಳ್ಳುವ ಮೂಲಕ ಅರಣ್ಯ ಸಿಬ್ಬಂದಿ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಭರವಸೆ ಗಟ್ಟಿಗೊಳಿಸಿತು.

ಅರಮನೆ ಆವರಣಕ್ಕೆ ಸೆ.16ರಂದು ಆಗಮಿಸಿದ ಗಜಪಡೆ ಸೆ.17ರಿಂದ ನಡಿಗೆ ಆರಂಭಿಸಿದ್ದವು. ಸೆ.20ರಿಂದ ಆನೆಗಳಿಗೆ ಭಾರ ಹೊರಿಸುವ ತಾಲೀಮು ಆರಂಭಿಸಲಾಗಿತ್ತು. ಮೊದಲ ದಿನ ಅಭಿಮನ್ಯುವಿಗೆ, 2ನೇ ದಿನ ಧನಂಜಯ, 3ನೇ ದಿನ ಗೋಪಾಲ ಸ್ವಾಮಿಗೆ ಭಾರ ಹೊರಿಸುವ ತಾಲೀಮು ನಡೆಸಲಾಗಿತ್ತು. ತಾಲೀ ಮಿನ 4ನೇ ದಿನವಾದ ಇಂದು ಅಭಿಮನ್ಯು ಭಾರ ಹೊರುವ ಎರಡನೇ ದಿನದ ತಾಲೀಮಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿತ್ತು.
ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇವಾ ಲಯದ ಬಳಿಯಿಂದ ಗಾದಿ, ನಮ್ದಾದೊಂದಿಗೆ ತೊಟ್ಟಿಲಿನಲ್ಲಿ 500ಕೆಜಿ ತೂಕದ ಮರಳು ಮೂಟೆ ಹೊರಿಸಲಾಯಿತು. ನಂತರ ಜಂಬೂಸವಾರಿ ದಿನ ಅರಮನೆ ಆವರಣದಲ್ಲಿ ಅಂಬಾರಿ ಹೊತ್ತು ಸಾಗಲಿರುವ ಮಾರ್ಗದಲ್ಲಿ ಕರೆದೊಯ್ಯಲಾಯಿತು. ನಂತರ ಅರ ಮನೆ ಸುತ್ತಲೂ ಎರಡು ರೌಂಡ್ ಕರೆದೊಯ್ದು ತಾಲೀಮು ನಡೆಸ ಲಾಯಿತು. ಅರಮನೆಯಲ್ಲೇ 2.5 ಕಿಮಿ ದೂರ ತಾಲೀಮು ನಡೆಸಿದ ನಂತರ ಕೋಡಿ ಸೋಮೇಶ್ವರ ದೇವಾಲಯದ ಬಳಿ ಕರೆದೊಯ್ದು ಮರಳಿನ ಮೂಟೆ ಕೆಳಗಿಳಿಸಿ ವಿಶ್ರಾಂತಿ ನೀಡಲಾಯಿತು.

ವಿಶೇಷ ಆಹಾರಕ್ಕೆ ಒಗ್ಗಿಕೊಳ್ಳುತ್ತಿದೆ ಗಜಪಡೆ: ದಸರಾ ಗಜಪಡೆ ಸೆ.16ರಂದು ಅರಮನೆ ಆವರಣಕ್ಕೆ ಆಗಮಿಸಿದ್ದವು. ಸೆ.18ರಿಂದ ವಿಶೇಷ ಆಹಾರ ನೀಡಲಾರಂಭಿಸಲಾಗಿತ್ತು. ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಆಹಾರ ನೀಡಲಾಗುತ್ತಿತ್ತು. ಇದೀಗ ಗಜಪಡೆ ವಿಶೇಷ ಆಹಾರ ಸೇವನೆಗೆ ಒಗ್ಗಿಕೊಳ್ಳುತ್ತಿದೆ. ಎಲ್ಲಾ ಆನೆಗಳಿಗೂ ರಾಜಾ ತಿಥ್ಯ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಎಲ್ಲಾ ಆನೆಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ವಿಕ್ರಮ ಆನೆಯಲ್ಲಿನ ಮದದ ಅಂಶ ಇಳಿಮುಖವಾಗುತ್ತಿದ್ದು, ಮಾವುತರು, ಕಾವಾಡಿಗಳಲ್ಲಿ ಸಮಾ ಧಾನ ತಂದಿದೆ. ಆದರೂ ಎಲ್ಲಾ ಆನೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಯೋಗ ಕ್ಷೇಮ ನೋಡಿಕೊಳ್ಳÀಲಾಗುತ್ತಿದೆ. ಡಿಸಿಎಫ್ ಡಾ. ವಿ.ಕರಿಕಾಳನ್, ಪಶುವೈದ್ಯ ಡಾ.ಹೆಚ್.ರಮೇಶ್, ಸಹಾಯಕ ರಂಗರಾಜು ಸೇರಿ ಹಲವರು ಆನೆಗಳ ಸೇವೆಯಲ್ಲಿ ನಿರತರಾಗಿದ್ದಾರೆ.

Source:mysoremithra