ಮೃತ ಮಗನ ಫೋಟೋ ಜೊತೆ ಯುವರತ್ನ ನೋಡಿದ ಪಾಲಕರ ಅಭಿಮಾನಕ್ಕೆ ಪುನೀತ್​ ಭಾವುಕ ಮಾತು!

Apr 5, 2021

ಜನರು ಹಲವು ಬಗೆಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ಮೈಸೂರಿನಲ್ಲಿ ನಡೆದ ಈ ಘಟನೆಯಿಂದ ಪುನೀತ್​ ರಾಜ್​ಕುಮಾರ್​ ಹೆಚ್ಚು ಎಮೋಷನಲ್​ ಆಗಿದ್ದಾರೆ.ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಫ್ಯಾಮಿಲಿ ಪ್ರೇಕ್ಷಕರು ಹೆಚ್ಚು. ಅವರ ಪ್ರತಿ ಸಿನಿಮಾಗಳನ್ನೂ ಕೌಟುಂಬಿಕ ಪ್ರೇಕ್ಷಕರು ಇಷ್ಟಪಡುತ್ತಾರೆ. ಅಂಥ ಆಡಿಯನ್ಸ್​ಗೆ ಇಷ್ಟ ಆಗುವಂತಹ ಕಥೆಗಳನ್ನೇ ಪುನೀತ್​ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ರಿಲೀಸ್​ ಆಗಿರುವ ಯುವರತ್ನ ಸಿನಿಮಾದಲ್ಲೂ ಆ ಟ್ರೆಂಡ್​ ಮುಂದುವರಿದಿದೆ. ಆದರೆ ಈ ಚಿತ್ರವನ್ನು ನೋಡುವ ಆಸೆ ಇಟ್ಟುಕೊಂಡಿದ್ದ ಅಭಿಮಾನಿಯೊಬ್ಬ ಕೆಲವೇ ದಿನಗಳ ಹಿಂದೆ ಮೃತಪಟ್ಟಿದ್ದ. ಆತನ ಪೋಷಕರು ಮಗನ ಫೋಟೋ ಇಟ್ಟುಕೊಂಡು ಚಿತ್ರಮಂದಿರದಲ್ಲಿ ಯುವರತ್ನ ಸಿನಿಮಾ ವೀಕ್ಷಿಸಿದ್ದಾರೆ. ಈ ಘಟನೆಗೆ ಪುನೀತ್​ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.

ಜನರು ಹಲವು ಬಗೆಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ಮೈಸೂರಿನಲ್ಲಿ ನಡೆದ ಈ ಘಟನೆಯಿಂದ ಪುನೀತ್​ ಹೆಚ್ಚು ಎಮೋಷನಲ್​ ಆಗಿದ್ದಾರೆ. ಮೂರು ತಿಂಗಳ ಹಿಂದೆ ಹರಿಕೃಷ್ಣನ್ ಎಂಬ ಬಾಲಕ ಮೃತಪಟ್ಟಿದ್ದ. ಆತನಿಗೆ ಪುನೀತ್​ ರಾಜ್​ಕುಮಾರ್ ಬಗ್ಗೆ ಅಪಾರ ಅಭಿಮಾನವಿತ್ತು. ಯುವರತ್ನ ಸಿನಿಮಾ ನೋಡಬೇಕೆಂದು ಆಸೆ ಪಟ್ಟಿದ್ದ. ಈ ಕಾರಣದಿಂದ, ಮಗನ ಆಸೆಯಂತೆ ಪೋಷಕರು ಆತನ ಫೊಟೋ ಇಟ್ಟುಕೊಂಡು ಮೈಸೂರಿನ ಡಿಆರ್​​ಸಿ‌ ಮಲ್ಟಿಪ್ಲೆಕ್ಸ್​ನಲ್ಲಿ‘ಯುವರತ್ನ’ ಸಿನಿಮಾ ನೋಡಿದ್ದಾರೆ.ಈ ಬಗ್ಗೆ ಪುನೀತ್​ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪವರ್​ ಸ್ಟಾರ್​ ಟ್ವೀಟ್​ ಮಾಡಿದ್ದಾರೆ. ಪುನೀತ್​ಗೆ ಮಾತ್ರವಲ್ಲದೇ ಅನೇಕ ಅಭಿಮಾನಿಗಳು ಈ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.

ಸಂತೋಷ್​ ಆನಂದ್​ರಾಮ್​ ನಿರ್ದೇಶನದ ಈ ಸಿನಿಮಾದಲ್ಲಿ ಶಿಕ್ಷಣದ ಖಾಸಗೀಕರಣ, ಡ್ರಗ್ಸ್​ ಮಾಫಿಯಾ ಮತ್ತು ರ‍್ಯಾಗಿಂಗ್​ ಪಿಡುಗಿನ ಬಗ್ಗೆ ಸಂದೇಶ ನೀಡಲಾಗಿದೆ. ಹಾಗಾಗಿ ಯುವಜನತೆ ಮತ್ತು ಪೋಷಕರಿಗೆ ‘ಯುವರತ್ನ’ ಇಷ್ಟ ಆಗುತ್ತಿದೆ.
‘ಯುವರತ್ನ’ ಸಿನಿಮಾ ಏ.1ರಂದು ರಿಲೀಸ್​ ಆಗಿತ್ತು. ಆದರೆ ಬಿಡುಗಡೆಯಾದ ಎರಡೇ ದಿನಕ್ಕೆ ಶೇ.50 ಆಸನ ಮಿತಿ ಆದೇಶವನ್ನು ಸರ್ಕಾರ ಹೊರಡಿಸಿದ್ದರಿಂದ ಕೆಲವು ಸಮಯ ಗೊಂದಲ ಆಯಿತು. ನಂತರ ಆದೇಶ ಹಿಂಪಡೆದ ಸರ್ಕಾರ ಏ.7ರವರೆಗೂ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಹಾಗಾಗಿ ಚಿತ್ರತಂಡ ನಿರಾಳ ಆಗಿದೆ. ಹೌಸ್​ ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಮಹಿಳೆಯರು ಮತ್ತು ಮಕ್ಕಳು ಕೂಡ ಮುಖ್ಯಮಂತ್ರಿಗಳಿಗೆ ಸೋಷಿಯಲ್​ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದರು.
Source:TV9Kannada