2027ರಲ್ಲಿ ಅಂತರಿಕ್ಷದಲ್ಲಿ ಮೊದಲ ಹೋಟೆಲ್‌: 400 ಜನರಿಗೆ ರೂಂ, ಬಾರ್‌, ಜಿಮ್!

Mar 3, 2021

ಲಂಡನ್‌(ಮಾ.03): ಅಂತರಿಕ್ಷಕ್ಕೆ ಹೋಗಿ ಹಾಯಾಗಿ ಕೆಲ ಕಾಲ ಕಳೆದು, ಊಟ-ತಿಂಡಿ ಮಾಡಿಕೊಂಡು, ಅಲ್ಲಿಂದ ಭೂಮಿ ಹೇಗೆ ಕಾಣಿಸುತ್ತದೆಯೆಂದು ನೋಡಿಕೊಂಡು ಮರಳಿ ಭೂಮಿಗೆ ಬರುವುದು ಸಾಧ್ಯವಿದ್ದರೆ ಹೇಗಿರುತ್ತದೆ? ಎಲ್ಲವೂ ಅಂದುಕೊಂಡಂತೆ ಆದರೆ 2027ರಲ್ಲಿ ಇದು ಸಾಧ್ಯವಾಗಲಿದೆ. ವಿಶ್ವದ ಮೊದಲ ಅಂತರಿಕ್ಷ ಹೋಟೆಲ್‌ ನಿರ್ಮಿಸಲು ಅಮೆರಿಕದ ಆರ್ಬಿಟಲ್‌ ಅಸೆಂಬ್ಲಿ ಎಂಬ ಸ್ಟಾರ್ಟಪ್‌ ಕಂಪನಿಯೊಂದು ಯೋಜನೆ ರೂಪಿಸಿದೆ.

ಭೂಮಿಯ ಕಕ್ಷೆಯೊಳಗೇ ‘ವೊಯೇಜರ್‌ ಸ್ಟೇಶನ್‌’ ಹೆಸರಿನ ನಿಲ್ದಾಣವೊಂದನ್ನು ನಿರ್ಮಿಸಲು ಕ್ಯಾಲಿಫೋರ್ನಿಯಾದ ‘ಆರ್ಬಿಟಲ್‌ ಅಸೆಂಬ್ಲಿ’ ಕಂಪನಿ ನಿರ್ಧರಿಸಿದೆ. 2025ರಲ್ಲಿ ಇದರ ನಿರ್ಮಾಣ ಆರಂಭವಾಗಲಿದ್ದು, 2027ಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದೊಂದು ಸ್ಪೇಸ್‌ಶಿಪ್‌ ರೀತಿ ಕಾರ್ಯನಿರ್ವಹಿಸಲಿದೆ. ಇದರಲ್ಲೇ 400 ಜನರಿಗೆ ಏಕಕಾಲಕ್ಕೆ ಆತಿಥ್ಯ ನೀಡುವ ವೊಯೇಜರ್‌ ಸ್ಟೇಶನ್‌ ಹೆಸರಿನ ಹೋಟೆಲ್‌ ಇರಲಿದೆ.

ಈ ಹೋಟೆಲ್‌ ಗುರುತ್ವಾಕರ್ಷಣೆಯನ್ನು ಕಾಪಾಡಿಕೊಳ್ಳಲು ಪ್ರತಿ 90 ನಿಮಿಷಕ್ಕೊಮ್ಮೆ ಭೂಮಿಯನ್ನು ಸುತ್ತಲಿದೆ. ಜನರು ಶಾಶ್ವತವಾಗಿ ತಮಗಾಗಿ 12/12 ಮೀಟರ್‌ ಅಳತೆಯ ಜಾಗ ಖರೀದಿಸಿ ಇಲ್ಲಿ ವಿಲ್ಲಾ ಅಥವಾ ಹೋಟೆಲ್‌ ಅಥವಾ ಸ್ಪಾ ಕೂಡ ಆರಂಭಿಸಲು ಅವಕಾಶವಿದೆ. ಜೊತೆಗೆ, ಆರ್ಬಿಟಲ್‌ ಅಸೆಂಬ್ಲಿ ಕಂಪನಿಯು ಯಾವುದಾದರೂ ದೇಶದ ಸರ್ಕಾರ ಹಣ ನೀಡಿ ತನ್ನ ಸ್ಪೇಸ್‌ಶಿಪ್‌ನ ಭಾಗವೊಂದನ್ನು ಶಾಶ್ವತ ಬಾಹ್ಯಾಕಾಶ ತರಬೇತಿ ಕೇಂದ್ರವಾಗಿ ಬಳಸಿಕೊಳ್ಳಲು ಮುಂದೆ ಬರುತ್ತದೆಯೇ ಎಂದೂ ಎದುರು ನೋಡುತ್ತಿದೆ.

ಹೊರಗಿನಿಂದ ನೋಡುವುದಕ್ಕೆ ಈ ಹೋಟೆಲ್‌ ವೃತ್ತಾಕಾರದಲ್ಲಿರುತ್ತದೆ. ಚಂದ್ರನ ಮೇಲ್ಮೈನಲ್ಲಿ ಇರುವಂತಹ ಗುರುತ್ವಾಕರ್ಷಣೆ ಶಕ್ತಿಯನ್ನು ಇಲ್ಲಿ ಕೃತಕವಾಗಿ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಎಷ್ಟುಖರ್ಚು ತಗಲಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈಗಾಗಲೇ ಗೇಟ್‌ವೇ ಫೌಂಡೇಶನ್‌ನಂತಹ ಕೆಲ ಕಂಪನಿಗಳು ವೊಯೇಜರ್‌ ಸ್ಟೇಶನ್‌ನಲ್ಲಿ ಕೆಲ ಪಾಡ್‌ಗಳನ್ನು (ಟ್ಯೂಬ್‌ ಕೋಣೆ) ಖರೀದಿಸಲು ಮುಂದೆ ಬಂದಿವೆ. ಗುರುತ್ವಾಕರ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಂಡ ಮೇಲೆ ‘ಸ್ಟಾರ್‌’ ಹೆಸರಿನ ರೋಬೋಟ್‌ ಈ ಹೋಟೆಲ್‌ನ ನಿರ್ಮಾಣ ಕಾರ್ಯ ಆರಂಭಿಸಲಿದೆ ಎಂದು ತಿಳಿದುಬಂದಿದೆ.

ಹೋಟೆಲ್‌ನಲ್ಲಿ ಏನಿರಲಿದೆ?

ಚಕ್ರಾಕಾರದ ವೊಯೇಜರ್‌ ಸ್ಟೇಶನ್‌ ಹೋಟೆಲ್‌ನಲ್ಲಿ ವಾಹನದ ಚಕ್ರಕ್ಕಿರುವ ಕಡ್ಡಿಗಳ ರೀತಿಯಲ್ಲಿ, ಅಂದರೆ ಇಂಗ್ಲಿಷ್‌ನ ಎಕ್ಸ್‌ ಆಕಾರದಲ್ಲಿ, ಟ್ಯೂಬ್‌ಗಳಿರಲಿವೆ. ಆ ಟ್ಯೂಬ್‌ಗಳಲ್ಲಿ ಹೋಟೆಲ್‌ ಕೋಣೆಗಳಿರಲಿವೆ. ಅವುಗಳಿಗೆ ಪಾಡ್‌ ಎಂದು ಕರೆಯಲಾಗುತ್ತದೆ. ಅಲ್ಲೇ ರೆಸ್ಟೋರೆಂಟ್‌, ಹೆಲ್ತ್‌ ಸ್ಪಾ, ಸಿನಿಮಾ ಹಾಲ್‌, ಲೈಬ್ರರಿ, ಜಿಮ್‌, ಸಭಾಂಗಣ, ಭೂಮಿಯನ್ನು ನೋಡುವ ಲಾಂಜ್‌, ಬಾರ್‌ ಕೂಡ ಇರಲಿದೆ. ಹಾಗೂ ಹೋಟೆಲ್‌ ಸಿಬ್ಬಂದಿಯ ಕ್ವಾರ್ಟ​ರ್‍ಸ್, ಆಮ್ಲಜನಕದ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ವಿದ್ಯುತ್‌ ವ್ಯವಸ್ಥೆ ಕೂಡ ಇರಲಿದೆ.

Source: Suvarna News