ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಕೆ: ತನ್ವೀರ್ ವಿಶ್ವಾಸ

Jan 19, 2021

ಮೈಸೂರು, ಜ.18(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಮುಂದುವರೆಯಲಿದೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂ ದಿಗೆ ಮಾತನಾಡಿದ ಅವರು, 5 ವರ್ಷದ ಆಡಳಿತಕ್ಕೆ ಕಾಂಗ್ರೆಸ್-ಜೆಡಿಎಸ್ ನಡುವೆ ಒಪ್ಪಂದವಾಗಿದ್ದು, ಈಗ 2 ವರ್ಷ ಪೂರೈಸಿದೆ. ಮೈತ್ರಿ ಮುಂದುವರಿಕೆ ನಿಟ್ಟಿನಲ್ಲಿ ನನಗೆ ಪಕ್ಷ ಜವಾಬ್ದಾರಿ ನೀಡಿರುವುದರಿಂದ ಜೆಡಿಎಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಈಗಾಗಲೇ ಶಾಸಕರಾದ ಜಿ.ಟಿ.ದೇವೇಗೌಡರು ಹಾಗೂ ಸಾ.ರಾ.ಮಹೇಶ್ ಅವರೊಂದಿಗೆ ಮಾತ ನಾಡಿದ್ದೇನೆ ಎಂದು ತಿಳಿಸಿದರು.

ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಂಪನ್ಮೂಲ ಕೊರತೆಯಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದು ಉತ್ತಮ ಎಂದು ಹೇಳುವುದು ಸಹಜ. ಅಲ್ಲದೆ ಕಳೆದ ಅವಧಿಯಲ್ಲಿ ಅಧಿಕಾರ ನಡೆಸಲು ಕೆಲ ಕಾರ್ಪೊರೇಟರ್‍ಗಳು ಸಹಕಾರ ನೀಡಲಿಲ್ಲ ಎಂಬ ಅಸಮಾಧಾನವಿದೆ. ಅದನ್ನೆಲ್ಲಾ ಸರಿ ಪಡಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿ ನಲ್ಲಿ ಇನ್ನುಳಿದ 3 ವರ್ಷವೂ ಮೈತ್ರಿ ಮುಂದುವರೆ ಸುವ ವಿಶ್ವಾಸ ಹೊಂದಿದ್ದೇವೆ. ರಾಜಕೀಯ ವಿದ್ಯ ಮಾನಗಳನ್ನು ಗಮನಿಸಿಕೊಂಡು, ಮೀಸಲಾತಿ ಪ್ರಕಟ ಗೊಂಡ ಬಳಿಕ ಈ ನಿಟ್ಟಿನಲ್ಲಿ ಮುಂದುವರೆ ಯುವುದಾಗಿ ತನ್ವೀರ್ ಸೇಠ್ ಹೇಳಿದರು.

ಹಳೇ ಮೈಸೂರು ಭಾಗಕ್ಕೆ ಅನ್ಯಾಯ: ಪ್ರಶ್ನೆಯೊಂ ದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ನಗರ ಹಾಗೂ ಬೆಳಗಾವಿ ಜಿಲ್ಲೆಗಳ ಶೇ.50ರಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ನಾನು ಇಲ್ಲಿಯ ಶಾಸಕರ ಬಗ್ಗೆ ಅನುಕಂಪದಿಂದ ಮಾತನಾಡುತ್ತಿಲ್ಲ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಈ ಭಾಗದವರಿಗೆ ಸಚಿವ ಸ್ಥಾನ ನೀಡ ಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ ಎಂದು ತಿಳಿಯಿತು. ಸಚಿವರೇ ಹೀಗಾ ದರೆ ಜನರ ಗತಿಯೇನು. ಅನ್ಯಮಾರ್ಗದಿಂದ ರಚನೆ ಯಾಗಿರುವ ಸರ್ಕಾರಕ್ಕೆ ಜನಹಿತ ಆಡಳಿತಕ್ಕಿಂತ ಅಧಿಕಾರ ಪ್ರಯೋಗ ಹಾಗೂ ಅದರ ಲಾಭದ ಬಗ್ಗೆ ಮಾತ್ರ ಆಸಕ್ತಿ ಯಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಕ್ರಮ ಗಳಾಗುತ್ತಿಲ್ಲ. ಬಿಜೆಪಿ ಒಡೆದ ಮನೆಯಾಗಿದ್ದು, ಸರ್ಕಾರ ಇನ್ನೂ ಟೇಕ್‍ಆಫ್ ಆಗಿಲ್ಲ ಎಂದು ಟೀಕಿಸಿದರು.

ಯತ್ನಾಳ್ ಬಂದರೆ ಸ್ವಾಗತಿಸುತ್ತೇನೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಕಾರ್ಯಕ್ರಮಗಳನ್ನು ಮುಂದುವರೆಸು ವಂತೆ ಚಾಟಿ ಬೀಸುವುದು ನಮ್ಮ ಕರ್ತವ್ಯ. ಅದಕ್ಕೆ ಸರ್ಕಾರದಲ್ಲಿ ಕಾಂಗ್ರೆಸ್ ಹೇಳಿದಂತೆ ನಡೆಯುತ್ತಿದೆ ಎಂದು ಯತ್ನಾಳ್ ಅವರು ಹೇಳಿದ್ದರೆ ಅವರು ಬಿಜೆಪಿಯಲ್ಲಿದ್ದು ಸಾಧಿಸುವುದು ಕಷ್ಟ. ಹಾಗಾಗಿ ಅವರನ್ನು ನಮ್ಮ ಪಕ್ಷಕ್ಕೆ ಆಹ್ವಾನಿಸುತ್ತೇನೆ ಎಂದರು.

ರಾಜಕೀಯ ಬಂಡವಾಳ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆ ಎಂದು ಉದ್ದವ್ ಠಾಕ್ರೆ ಟ್ವಿಟ್ ಮಾಡಿರುವ ಬಗ್ಗೆ ಮಾತನಾಡಿ, ಇದು ದೇಶದ್ರೋಹಿಗಳು ಮಾಡುವ ಕೆಲಸ. ಕರ್ನಾಟಕದ ಒಂದಿಂಚೂ ಭೂಮಿ ಬೇರೆಯ ವರಿಗೆ ಕೊಡುವೆ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಗಡಿಭಾಗಗಳ ಅಭಿವೃದ್ಧಿಗಾಗಿ ಕಟ್ಟಲಾದ ಸುವರ್ಣಸೌಧದಲ್ಲಿ ಕಳೆದ 3 ವರ್ಷಗಳಿಂದ ಅಧಿವೇಶನಗಳೇ ನಡೆದಿಲ್ಲ. ಇತ್ತೀಚೆಗೆ ಉತ್ತರ ಕರ್ನಾ ಟಕದ ಅಭಿವೃದ್ದಿ ಕೇವಲ ರಾಜಕೀಯ ವಿಷಯವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ. ನಮ್ಮ ರಾಜ್ಯ ನೆಲ, ಜಲ, ಭಾಷೆ ಮೇಲೆ ಅಭಿಮಾನ ಇರಬೇಕು. ಈ ವಿಚಾರದಲ್ಲಿ ಸ್ವಾಭಿಮಾನದಿಂದ ನಡೆದುಕೊಳ್ಳಬೇಕು ಎಂದರು.

ಇಬ್ರಾಹಿಂ `ಕೈ’ ಬಿಡುವುದಿಲ್ಲ: ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರುತ್ತಾರೆಂಬ ಸುದ್ದಿ ಬಗ್ಗೆ ಮಾತನಾಡಿ, ಅವರು ನಮ್ಮ ನಾಯಕ ರಾಗಿದ್ದು ಎಲ್ಲರೊಂದಿಗೆ ಸಮಾಲೋಚನೆ ನಡೆಸದೆ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ. ಈಗಿನ ರಾಜ ಕೀಯ, ಸಾಮಾಜಿಕ, ಆರ್ಥಿಕ ವಾತಾವರಣ ಸರಿಯಿಲ್ಲ. ಈ ಸಂದರ್ಭದಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯದ ಬಗ್ಗೆ ಆಲೋಚಿಸಿ, ನಿರ್ಧಾರ ತೆಗೆದು ಕೊಳ್ಳಬೇಕು. ಬೇರೆ ಬೇರೆ ಕಾರಣಗಳಿಗೆ ಪಕ್ಷ ತೊರೆದ ರೋಷನ್‍ಬೇಗ್ ಅವರಿಗೆ ಈಗಿರುವ ಸ್ಥಾನಮಾನ, ಮಾನ್ಯತೆ ಬಗ್ಗೆ ವಿಶ್ಲೇಷಿಸುವುದು ಬೇಡ. ಆದರೆ ಇಬ್ರಾಹಿಂ ಅವರೊಂದಿಗೆ ಮಾತನಾಡುತ್ತೇವೆ. ಅವರು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಬ್ಲ್ಯಾಕ್‍ಮೇಲ್‍ಗೆ ಕಡಿವಾಣ ಅಗತ್ಯ: ಚರ್ಚೆಯಲ್ಲಿ ರುವ ಸಿಡಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸತ್ಯ ಸಂಗತಿ ಹೊರಬರುವವರೆಗೂ ಇಂತಹ ವಿಚಾರಗಳ ಬಗ್ಗೆ ಮಾತನಾಡಬಾರದು. ಹಿಂದೆ ಗ್ರಂಥಪಾಲಕರಿಂದ ಕೋಟಿ ರೂ. ಹಣ ಪಡೆದಿರುವ ಸಿಡಿ ಇದೆ ಎಂದು ನನ್ನ ವಿರುದ್ಧವೇ ಆರೋಪ ಮಾಡಿದ್ದರು. ರಾಜ ಕೀಯದಲ್ಲಿ ಈ ರೀತಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಕಡಿವಾಣ ಅಗತ್ಯವಿದೆ ಎಂದು ಹೇಳಿದರು.

Source:Mysore Mitra