Khel Ratna Award: ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​ ಹೆಸರಿಟ್ಟ ಪ್ರಧಾನಿ ಮೋದಿ; ಟ್ವಿಟರ್​​ನಲ್ಲಿ ಘೋಷಣೆ

Aug 6, 2021

ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ (Rajeev Gandhi Khel Ratna Award) ಇನ್ನು ಮುಂದೆ ಮೇಜರ್​ ಧ್ಯಾನ್ ಚಂದ್​ ಖೇಲ್​ರತ್ನ ಪ್ರಶಸ್ತಿ (Dhyan Chand Khel Ratna Award) ಯಾಗಿ ಕೊಡಲ್ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಘೋಷಿಸಿದರು. ಟ್ವೀಟ್ ಮಾಡಿರುವ ಅವರು, ಖೇಲ್ ರತ್ನ ಪ್ರಶಸ್ತಿಗೆ, ಭಾರತೀಯ ಹಾಕಿ ದಿಗ್ಗಜ ಮೇಜರ್​ ಧ್ಯಾನ್​ ಚಂದ್ (Dhyan Chand) ಹೆಸರಿಡುವಂತೆ ಅನೇಕ ನಾಗರಿಕರಿಂದ ನನಗೆ ಮನವಿ ಬಂದಿತ್ತು. ಆ ಕೋರಿಕೆಗಳನ್ನು ಪುರಸ್ಕರಿಸಲಾಗುವುದು. ಖೇಲ್​ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್​ ಹೆಸರಿಡಲಾಗುವುದು. ಇನ್ನು ಮುಂದೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಎಂಬ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಹಾಗೇ ಇಂಥದ್ದೊಂದು ವಿಚಾರವನ್ನು ಹಂಚಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ರಾಜೀವ್​ ಗಾಂಧಿ ಖೇಲ್​ರತ್ನ ಪ್ರಶಸ್ತಿ ಕ್ರೀಡಾಕ್ಷೇತ್ರದ ಅತ್ಯುನ್ನತ ಗೌರವವಾಗಿದೆ. ಇಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ. ಹಾಕಿ ದಿಗ್ಗಜ ಸರ್ದಾರ್​ ಸಿಂಗ್​, ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ, ಕ್ರಿಕೆಟರ್ಸ್​ಗಳಾದ ಮಹೇಂದ್ರ ಸಿಂಗ್​ ಧೋನಿ, ಸಚಿನ್​ ತೆಂಡೂಲ್ಕರ್​, ವಿರಾಟ್ ಕೊಹ್ಲಿ ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಷ್ಟು ದಿನಗಳಿಂದ ಇದು ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಎಂದು ಕೊಡಲ್ಪಡುತ್ತಿತ್ತು. ಆದರೀಗ ರಾಜೀವ್​ ಗಾಂಧಿ ಹೆಸರನ್ನು ತೆಗೆದು, ಹಾಕಿ ದಿಗ್ಗಜ ಧ್ಯಾನ್​ ಚಂದ್​ ನಾಮಕರಣ ಮಾಡಲಾಗಿದೆ.

ಧ್ಯಾನ್​ಚಂದ್​ ಅವರು ಭಾರತದ ಅಗ್ರಗಣ್ಯ ಕ್ರೀಡಾಪಟುಗಳಲ್ಲಿಒಬ್ಬರು. ಅವರು ಭಾರತಕ್ಕೆ ಗೌರವ, ಹೆಮ್ಮೆಯನ್ನು ತಂದಿದ್ದಾರೆ. ನಮ್ಮ ರಾಷ್ಟ್ರದ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್​ ರತ್ನಕ್ಕೆ ಅವರ ಹೆಸರನ್ನಿಡುವುದು ತುಂಬ ಸರಿಯಾದ ಕೆಲಸ. ಹೀಗೊಂದು ದೃಷ್ಟಿಕೋನವನ್ನು ನನಗೆ ತಿಳಿಸಿದವರಿಗೆ ಕೃತಜ್ಞತೆಗಳು ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Source: Tv9 kannada