18 ಗಂಟೆಯಲ್ಲಿ 25.54 ಕಿಮೀ ರಸ್ತೆ ನಿರ್ಮಿಸಿ ಲಿಮ್ಕಾ ದಾಖಲೆ!
ವಿಜಯಪುರ (ಫೆ.27):ಕೇವಲ 18 ಗಂಟೆಗಳಲ್ಲಿ 25.54 ಕಿಮೀ ರಾಷ್ಟ್ರೀಯ ಹೆದ್ದಾರಿಯ ಸಿಂಗಲ್ ರಸ್ತೆ ನಿರ್ಮಿಸಿ ಲಿಮ್ಕಾ ದಾಖಲೆಗೆ ಸೇರಲು ಕಾರಣಾದ ಕಾರ್ಮಿಕರ ಸಾಧನೆಗೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಶ್ಲಾಘನೆ ವ್ಯಕ್ತಪಡಿಸಿ, ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತೀನ್ ಗಡ್ಕರಿ, ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರ ನೇತೃತ್ವದಲ್ಲಿ ಚಾಲನೆ ನೀಡಲಾದ ಸೋಲಾಪುರ-ವಿಜಯಪುರ ಮಾರ್ಗದ ಪೈಕಿ 25.54 ಕಿಮೀ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಯನ್ನು ಕೇವಲ 18 ಗಂಟೆಗಳಲ್ಲಿ 500 ಜನ ಕಾರ್ಮಿಕರು ಭಾಗಿಯಾಗಿ ಪೂರ್ಣಗೊಳಿಸಿದ್ದಾರೆ. ಇದು ಲಿಮ್ಕಾ ಬುಕ್‌ನಲ್ಲಿ ಇದು ದಾಖಲಾಗಿದೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಈ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. ಈ ಕಾರ್ಯ ಶ್ಲಾಘನೀಯವಾದುದು ಎಂದು ಡಿಸಿಎಂ, ಕೇಂದ್ರ ಸಚಿವ ನಿತೀನ್ ಗಡ್ಕರಿ ತಂಡಕ್ಕೆ ಅಭಿನಂದಿಸಿದ್ದಾರೆ. ಒಟ್ಟು 110 ಕಿಮೀ ಉದ್ದದ ಚತುಷ್ಪಥ ರಸ್ತೆ ಕಾಮಗಾರಿ ಇಲ್ಲಿ ನಡೆಯುತ್ತಿದೆ.
ಈ ರಸ್ತೆಯನ್ನು ಐದು ಭಾಗ ಮಾಡಿ ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಮೂರು, ಮಹಾರಾಷ್ಟ್ರದಲ್ಲಿ ಎರಡು ಕಡೆ ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಧೂಳಖೇಡ, ಹೊರ್ತಿ ತಾಂಡಾ ಎಲ್‌ಟಿ-2, ತಿಡಗುಂದಿ ಹಾಗೂ ಮಹಾರಾಷ್ಟ್ರದಲ್ಲಿ ಸೋಲಾಪೂರ ಬೈಪಾಸ್, ನಾಂದಣಿಯಲ್ಲಿ ನಿರ್ಮಿಸಿದ್ದು ಎಲ್ಲ ಕಡೆಗೂ ಸುಮಾರು 5 ಕಿಮೀಯಷ್ಟುರಸ್ತೆ ನಿರ್ಮಿಸಲಾಗಿದೆ. ಮೊದಲು 20 ತಾಸಿನಲ್ಲಿ 10 ಕಿಮೀ ನಿರ್ಮಿಸಬೇಕೆಂದು ಯೋಜನೆ ಹಾಕಿಕೊಂಡಿದ್ದರು. ಆದರೆ ಹತ್ತೇ ತಾಸಿನಲ್ಲಿ 13 ಕಿಮೀ ನಿರ್ಮಿಸಿದರು. ಹೇಗೋ 20 ತಾಸಿನ ಯೋಜನೆ ಹಾಕಿಕೊಂಡಿದ್ದು, ಇಷ್ಟುವೇಳೆಯಲ್ಲಿ ಎಷ್ಟುರಸ್ತೆ ನಿರ್ಮಿಸುತ್ತೇವೆಯೋ ಅಷ್ಟುನಿರ್ಮಿಸೋಣ ಎಂದುಕೊಂಡು ರಸ್ತೆ ನಿರ್ಮಿಸಿದರು. ಕೊನೆಗೆ 18 ಗಂಟೆಯಲ್ಲಿ 25.54 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿ ಶ್ಲಾಘನೆಗೆ ಪಾತ್ರವಾಯಿತು.
Source: Suvarna News