ಹೆಚ್​ಡಿ ಕುಮಾರಸ್ವಾಮಿ ಮುಂದೆ ಮಹಿಳೆಯರ ಹೈಡ್ರಾಮಾ; ಕೂಗಾಡಿ ನಾಟಕ ಮಾಡಬೇಡಿ ಎಂದು ಹೆಚ್​ಡಿಕೆ ಗರಂ

Aug 16, 2021

ರಾಮನಗರ: ಜಿಲ್ಲೆಯ ಕೊತ್ತಿಪುರ ಗ್ರಾಮದಲ್ಲಿ ಕೊಳಚೆ ನಿರ್ಮೂಲನ ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಾಣವಾಗುತ್ತಿರುವ ಮನೆಗಳ ಶಂಕುಸ್ಥಾಪನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೆರಳಿದ್ದ ವೇಳೆ ಮಹಿಳೆಯರು ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ಚಿಕ್ಕತಾಯಮ್ಮ, ಪರಿಮಳಾ ಎಂಬುವವರು ಕುಮಾರಸ್ವಾಮಿ ಮುಂದೆ ಹೈಡ್ರಾಮಾ ಮಾಡಿದ್ದಾರೆ. ಕೊಳಚೆ ನಿರ್ಮೂಲನೆ ಅಭಿವೃದ್ಧಿ ಮಂಡಳಿಯಿಂದ ಮನೆಗಳ ನಿರ್ಮಾಣ ಕಾರ್ಯಕ್ಕೆ ಭೂಮಿ ಬರೆದುಕೊಟ್ಟಿದ್ದ ಕುಟುಂಬಕ್ಕೆ ಸರಿಯಾದ ಪರಿಹಾರ ಕೊಟ್ಟಿಲ್ಲವೆಂದು ಮಹಿಳೆಯರು ಕೂಗಾಟ ನಡೆಸಿದ್ದಾರೆ. ಸರಿಯಾದ ರೀತಿಯಲ್ಲಿ ನಡೆದುಕೊಂಡ್ರೆ ನ್ಯಾಯ ಕೊಡಿಸ್ತೇನೆ. ಜೋರಾಗಿ ಕೂಗಾಡಿ ನಾಟಕ ಮಾಡಬೇಡಿ ಎಂದು ಮಹಿಳೆಯರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದಾರೆ. ನಿಮ್ಮ ತಂದೆ ಜಮೀನು ಬರೆದುಕೊಟ್ಟಾಗ ನೀವು ಎಲ್ಲಿ ಹೋಗಿದ್ರಿ ಎಂದು ಮಹಿಳೆಯರಿಗೆ ಕುಮಾರಸ್ವಾಮಿ ಪ್ರಶ್ನೆ ಕೇಳಿದ್ದಾರೆ.

ಬಳಿಕ, ನೀರಾವರಿ ಯೋಜನೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಮೇಕೆದಾಟು ಯೋಜನೆ ಈಗಾಗಲೇ ಆರಂಭವಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರದ ಹೇಳಿಕೆಗಳು ಕೇವಲ ಘೋಷಣೆಯಾಗಿ ಉಳಿದಿವೆ. ಕೇವಲ ಮೇಕೆದಾಟು ಯೋಜನೆ ಒಂದೇ ಅಲ್ಲ, ಎತ್ತಿನಹೊಳೆ ಯೋಜನೆಯಲ್ಲೂ ಹಲವು ಸಮಸ್ಯೆಗಳು ಇವೆ. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಮೇಕೆದಾಟು ಯೋಜನೆ ಆರಂಭ ಮಾಡಬೇಕಿತ್ತು. ಆದರೆ, ರಾಜಕೀಯವಾಗಿ ಹಲವು‌ ಸಮಸ್ಯೆಗಳನ್ನು ಈ ಸರ್ಕಾರ ಅನುಭವಿಸುತ್ತಿದೆ. ಈಗಾಗಲೇ ರಾಜ್ಯಪಾಲರನ್ನ ಕೂಡ ಭೇಟಿ ಮಾಡಿದ್ದೇವೆ. ರಾಷ್ಟ್ರಪತಿಗಳು, ಕೇಂದ್ರ ಸರ್ಕಾರ ಮನವೊಲಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಎತ್ತಿನ ಹೊಳೆ ಯೋಜನೆಯಲ್ಲೂ ಹಲವಾರು ಸಮಸ್ಯೆಗಳು ಇವೆ. ಅದು 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಕಾರ್ಯಕ್ರಮ. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡುತ್ತೇವೆ ಎಂದು ಆರಂಭವಾದ ಕಾರ್ಯಕ್ರಮ ಇದೀಗ 23 ಸಾವಿರ ಕೋಟಿಗೆ ಏರಿಕೆ ಆಗಿದೆ. ಈಗಿನ ವೇಗದಲ್ಲಿ ಹೋದರೆ ಎತ್ತಿನಹೊಳೆ ಯೋಜನೆಗೆ ಒಟ್ಟು 50 ಸಾವಿರ ಕೋಟಿ ಬೇಕು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಅವರ ಸಮಯ ಕೇಳಿದ್ದೇನೆ. ನೀರಾವರಿ ಸಮಸ್ಯೆಯನ್ನು ಬಗೆಹರಿಸುವಂತೆ ಚರ್ಚೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾಯಕರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಗಮನಿಸಬೇಕು
ಇತ್ತೀಚೆಗೆ ಕಾವೇರಿರುವ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಕೆಲವು ರಾಜಕೀಯ ನಾಯಕರ ಹೇಳಿಕೆಗಳ ಬಗ್ಗೆಯೂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸಿ.ಟಿ. ರವಿ, ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನ ಗಮನಿಸಿದ್ದೇನೆ. ದೇಶಕ್ಕೆ ಕೊಡುಗೆ ಕೊಟ್ಟವರ ಬಗ್ಗೆ ಲಘುವಾಗಿ ಮಾತಾಡಬಾರದು. ನಾಯಕರ ವೈಯಕ್ತಿಕ ಜೀವನವೇ ಬೇರೆ ಇರುತ್ತೆ. ಆದರೆ ಅವರು ದೇಶಕ್ಕೆ ಕೊಟ್ಟ ಕೊಡುಗೆ ಬಗ್ಗೆ ಗಮನಿಸಬೇಕು. ಅದು ನಮಗೆ ಮಾರ್ಗದರ್ಶನ ನೀಡುತ್ತದೆ. ಯಾರೂ ಕೂಡ ನಾಯಕರ ಬಗ್ಗೆ ಲಘುವಾಗಿ ಮಾತಾಡಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Source: tv9 Kannada