ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್; ಇ-ಬುಕ್ ಹಾಗೂ ಆಡಿಯೋ ರೂಪದಲ್ಲಿ ಬಿಡುಗಡೆಯಾಗಲಿದೆ ಕಿಚ್ಚನ ಬದುಕಿನ ಕತೆ
ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಸುದೀಪ್ ಅವರ ಬದುಕಿನ ಕತೆಯನ್ನು ಒಳಗೊಂಡ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕವು ಆಡಿಯೋ ಮತ್ತು ಇ ಬುಕ್ ರೂಪದಲ್ಲಿ ಬಿಡುಗಡೆಯಾಗಲಿದೆ. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ ‘ಕನ್ನಡ ಮಾಣಿಕ್ಯ ಕಿಚ್ಚ’ ಹೆಸರಿನ ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿ ದಾಖಲೆ ರೀತಿಯಲ್ಲಿ ಮಾರಾಟವಾಗಿತ್ತು. ಈ ಪುಸ್ತಕವೇ ಇಂದು ಮೈ ಲ್ಯಾಂಗ್ ಆಪ್ ಮೂಲಕ, ಕಿಚ್ಚ ಸುದೀಪ್ ಜನ್ಮದಿನದಂದು (ಸೆಪ್ಟೆಂಬರ್ 2) ಆಡಿಯೋ ಬಯೋಗ್ರಫಿ ಮತ್ತು ಇ ಬುಕ್ ರೂಪದಲ್ಲಿ ಹೊರ ಬರುತ್ತಿದೆ.
ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ ಈ ಪುಸ್ತಕಕ್ಕೆ ಧ್ವನಿ ನೀಡಿದ್ದು, ಸುದೀಪ್ ಅವರ ಬದುಕಿನ ಅನೇಕ ಘಟನೆಗಳನ್ನು ಮನಸೆಳೆಯುವಂತೆ ಓದಿದ್ದಾರೆ. ಬೆಂಗಳೂರಿನ ಕಾಯಕ ಪ್ರಕಾಶನ ಹೊರತಂದ ಈ ಕೃತಿಯು ಬಿಡುಗಡೆಯಾದ ಎರಡನೇ ದಿನಕ್ಕೆ ಮರುಮುದ್ರಣಗೊಂಡಿತ್ತು. ನಟ ಕಿಚ್ಚ ಸುದೀಪ್ ಅವರ ಸಮಗ್ರ ಜೀವನ, ಕುಟುಂಬ, ಇತರ ಸ್ಟಾರ್ ನಟರೊಂದಿಗೆ ಇರುವ ಅಪರೂಪದ ಚಿತ್ರಗಳನ್ನು ಹಾಗೂ ತಂದೆ, ತಾಯಿ, ಪತ್ನಿ ಹಾಗೂ ಮಕ್ಕಳ ಕುರಿತು ಕಿಚ್ಚ ಮಾತನಾಡಿರುವ ಬರಹಗಳನ್ನು ಪುಸ್ತಕ ಒಳಗೊಂಡಿದೆ.
ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಸಿಡಿಪಿ ಹಂಚಿಕೊಂಡ ಅನಿಲ್ ಕುಂಬ್ಳೆ:
ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ವಿಶೇಷ ಚಿತ್ರವೊಂದನ್ನು ತಯಾರಿಸಿದ್ದು, ಅದನ್ನು ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಬಿಡುಗಡೆಗೊಳಿಸಿದ್ದಾರೆ. ಚಿತ್ರವನ್ನು ಸುದೀಪ್ ದೊಡ್ಡ ಮೈದಾನವೊಂದರಲ್ಲಿ ನಿಂತು ತನ್ನ ಅಭಿಮಾನಿಗಳನ್ನು ಮಾತನಾಡಿಸುತ್ತಿರುವ ಅಭೂತಪೂರ್ವ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. ಸಿಡಿಪಿ ಎಂದರೆ ಕಾಮನ್ ಡಿಸ್ಪ್ಲೆ ಪ್ರೊಫೈಲ್. ವಿಶೇಷ ಸಂದರ್ಭಗಳಲ್ಲಿ ಶುಭಾಶಯ ಕೋರುವ ಸಲುವಾಗಿ ಎಲ್ಲರೂ ಹಾಕಿಕೊಳ್ಳಲು ರೂಪಿಸುವ ಚಿತ್ರವನ್ನು ಸಿಡಿಪಿ ಎನ್ನುತ್ತಾರೆ.
Source:Tv9kannada