ಮೈಸೂರು ರಾಜಮನೆತನದ ಆನೆಗಳನ್ನು ಗುಜರಾತ್​ಗೆ ಕಳುಹಿಸಲು ನಿರ್ಧಾರ

Sep 21, 2021

ಮೈಸೂರು: ರಾಜಮನೆತನದ ಆನೆಗಳನ್ನು (Elephants) ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಅರಮನೆಯಲ್ಲಿರುವ ಪ್ರತಿ ಆನೆಗಳನ್ನು ನಿರ್ವಹಣೆ ಮಾಡಲು ದಿನಕ್ಕೆ 10 ಸಾವಿರ ರೂ. ಖರ್ಚಾಗುತ್ತಿದೆ. ತಿಂಗಳಿಗೆ 6 ಆನೆಗಳ ನಿರ್ವಹಣೆಗೆ ಸುಮಾರು 18 ಲಕ್ಷ ರೂ. ವೆಚ್ಚವಾಗುತ್ತಿದೆ. ಹೀಗಾಗಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಸದ್ಯ ಆರು ಆನೆಗಳಿದ್ದು, ಇದರಲ್ಲಿ ನಾಲ್ಕು ಆನೆಗಳು ಗುಜರಾತ್​ಗೆ ಕಳುಹಿಸಲಾಗುತ್ತದೆ. ಇನ್ನುಳಿದ ಎರಡು ಆನೆಗಳು ಅರಮನೆಯಲ್ಲೇ ಉಳಿದುಕೊಳ್ಳಲಿವೆ.

ಅರಮನೆ ಆನೆಗಳು ದಸರಾ ಪರಂಪರೆಯ ಪೂಜೆ ವೇಳೆ ಬಳಕೆಯಾಗುತ್ತಿದ್ದವು. ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಿದ್ದವು. ಇದೀಗ ಎರಡು ಆನೆಗಳನ್ನು ಉಳಿಸಿಕೊಂಡು ಉಳಿದ ಆನೆಗಳ ರವಾನೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರಾಜಮನೆತನದವರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಸೀತಾ, ರೂಬಿ, ರಾಜೇಶ್ವರಿ, ಜೆಮಿನಿ ಹೆಸರಿನ ಆನೆಗಳು ಗುಜರಾತ್​ಗೆ ಕಳುಹಿಸಲಾಗುತ್ತದೆ. ಇನ್ನುಳಿದ ಚಂಚಲ್ ಮತ್ತು ಪ್ರೀತಿ ಹೆಸರಿನ ಎರಡು ಆನೆಗಳು ಅರಮನೆಯಲ್ಲೇ ಉಳಿಯಲಿವೆ.

ಗುಜರಾತ್ ಇಸ್ಕಾನ್​ಗೆ ಈ ಆನೆಗಳನ್ನು ಕಳುಹಿಸಲಾಗುತ್ತಿದೆ. ಅಲ್ಲಿ ಈಗಾಗಲೇ 50 ಆನೆಗಳಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ದಸರಾ ಉದ್ಘಾಟನೆಗೆ 15 ದಿನ ಮಾತ್ರ ಬಾಕಿ
ವಿಶ್ವ ಪ್ರಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೇವಲ 15 ದಿನ ಮಾತ್ರ ಬಾಕಿಯಿದೆ. ಈವರೆಗೂ ದಸರಾ ಉದ್ಘಾಟಕರು ಯಾರೆಂದು ನಿರ್ಧರಿಸಿಲ್ಲ. ಉದ್ಘಾಟಕರ ವಿಚಾರವಾಗಿ ಯಾವುದೇ ಚರ್ಚೆಯೂ ಆಗಿಲ್ಲ. ಇದುವರೆಗೂ ಯಾರೊಬ್ಬರ ಹೆಸರನ್ನೂ ಸರ್ಕಾರ ಪ್ರಸ್ತಾಪಿಸಿಲ್ಲ.

Source:tv9kannada