ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕನಸಿಗೆ ನೀರೆರೆದ

Mar 9, 2021

ಹಾಸನ (ಮಾ.09): ಅಂತೂ ಇಂತೂ ಹಾಸನದಲ್ಲೊಂದು ವಿಮಾನ ನಿಲ್ದಾಣ ಆಗಬೇಕು ಎನ್ನುವ ಎರಡೂವರೆ ದಶಕಗಳ ಕನಸು ನನಸಾಗುವ ಕಾಲ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದರ ರಾಜ್ಯ ಬಜೆಟ್‌ನಲ್ಲಿ ನಗರದ ಹೊರವಲಯದ ಬೂವನಹಳ್ಳಿ ಬಳಿಯ ವಿಮಾನ ನಿಲ್ದಾಣಕ್ಕೆ 175 ಕೋಟಿ ರುಪಾಯಿಗಳನ್ನು ಘೋಷಣೆ ಮಾಡುವ ಮೂಲಕ ಜಿಲ್ಲೆಯ ಘನತೆಗೆ ಮತ್ತೊಂದು ಗರಿ ಸೇರ್ಪಡೆಯಾಗುವ ಸೂಚನೆ ನಿಡಿದ್ದಾರೆ.

ವಿಮಾನ ನಿಲ್ದಾಣಕ್ಕೆ 175 ಕೋಟಿ ರುಪಾಯಿ, ಹಾಸನ ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಹೆಚ್ಚುವರಿ 100 ಸೀಟುಗಳು ಹಾಗೂ ಡಾ.ಬಿ.ಆರ್‌.ಅಂಬೇಡ್ಕರ ಅವರು ಭೇಟಿ ನೀಡಿದ್ದ ಹಾಸನದ ಎ.ಕೆ.ಬೋರ್ಡಿಂಗ್‌ ಹೋವನ್ನು ಸ್ಮಾರಕವನ್ನಾಗಿಸಲು 1 ಕೋಟಿ ರುಪಾಯಿಗಳನ್ನು ಘೋಷಣೆ ಮಾಡಿದ್ದಾರೆ. ಇದಿಷ್ಟುಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಪಾಲಿಗೆ ದಕ್ಕಿರುವ ಯೋಜನೆಗಳು.

ದೇವೇಗೌಡರ ಮಹದಾಸೆ: ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡರೇ ಮೊದಲ ಬಾರಿಗೆ ಹಾಸನದಲ್ಲಿ ವಿಮಾನ ನಿಲ್ದಾಣ ಆಗಬೇಕು ಎನ್ನುವ ಬೀಜ ಬಿತ್ತಿ ನೀರೆರೆದವರು. ತಾವು ಪ್ರಧಾನಿಯಾಗಿದ್ದಾಗ ಇದಕ್ಕೆ ಮುನ್ನುಡಿ ಬರೆದು ಭೂಮಿ ಸ್ವಾಧೀನವನ್ನೂ ಮಾಡಿಸಿದರು. ನಂತರ 2007 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಡೆಕ್ಕನ್‌ ಏವಿಯೇಷನ್‌ ಎನ್ನುವ ಸಂಸ್ಥೆಗೆ ಇದರ ಕೆಲಸದ ಬಜಾಬ್ದಾರಿ ವಹಿಸಿ ಸ್ವತ: ದೇವೇಗೌಡರೆ ಗುದ್ದಲಿಯಿಂದ ಭೂಮಿ ಅಗೆದು ಭೂಮಿಪೂಜೆ ಮಾಡಿದ್ದರು.

ಅದಾದ ನಂತರದಲ್ಲಿ ಬಂದಿದ್ದೆಲ್ಲವೂ ಅತಂತ್ರ ಸರ್ಕಾರಗಳೆ. ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರ ಹಿಡಯಲು ಆಗಲೇ ಇಲ್ಲ. ಹಾಗಾಗಿ ದೇವೇಗೌಡರ ಕನಸು ಕೂಡ ಹಾಗೇ ಕಮರಿತ್ತು. ಆದರೆ, ಇದೀಗ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡರು ಈ ಬಗ್ಗೆ ಆಸಕ್ತಿ ವಹಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದಿದ್ದರ ಫಲವಅಗಿ ಬಜೆಟ್‌ನಲ್ಲಿ ವಿಮಾನ ನಿಲ್ದಾಣದ ಕೂಸು ಹೆಜ್ಜೆ ಹಾಕಲಾರಂಭಿಸಿದೆ.

ಸಮಸ್ಯೆ ಬಗ್ಗೆ ಗಮನವಿಲ್ಲ: ಇದೆಲ್ಲಕ್ಕೂ ಸ್ವಾಗತ ಕೋರಿರುವ ಜನರು ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವ ಘೋಷಣೆಗಳು ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಕಾಡಾನೆ ಹಾಗೂ ಚಿರತೆ ಹಾವಳಿ ಹೆಚ್ಚುತ್ತಿದ್ದು, ಈ ಸಂಘರ್ಷದಲ್ಲಿ ಆನೆಗಳು, ಚಿರತೆ ಹಾಗೂ ಮನುಷ್ಯನೂ ಕೂಡ ಸಾಯುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಕಲೇಶಪುರದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಜನರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹೋಗಿದ್ದರು. ಹಾಗಾಗಿ ಮಲೆನಾಡು ಭಾಗದ ಜನ ಈ ಬಾರಿಯ ಬಜೆಟ್‌ನಲ್ಲಿ ಸಮಸ್ಯೆ ಬಗೆಹರಿಯಬಹುದು ಎನ್ನುವ ಕನಿಷ್ಠ ನಂಬಿಕೆಯೂ ಉಳಿಯಲಿಲ್ಲ.

ಹಾಗೆಯೇ ಜಿಲ್ಲೆಯ ಯಾವ ಭಾಗದಲ್ಲೂ ನೀರಾವರಿ ಯೋಜನೆಗಳಿಗಾಗಲಿ, ನಗರಾಭಿವೃದ್ಧಿಗಾಗಲಿ, ತೆಂಗು ಹಾಗೂ ಕಾಫಿ ಬೆಳೆಗಾರರಿಗಾಗಲಿ ಅನುಕೂಲವಾಗುವಂತ ಯಾವ ಘೋಷಣೆಗಳನ್ನೂ ಮಾಡಿಲ್ಲ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ತೀವ್ರ ಹಾನಿ ಉಂಟಾಗುತ್ತದೆ. ಇದರ ಪರಿಹಾರ ಮತ್ತು ನಿರ್ವಹಣೆಗೆ ಯಾವ ಅನುದಾನವನ್ನೂ ಘೋಷಣೆ ಮಾಡದಿರುವುದು ಮಲನಾಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಅಂಬೇಡ್ಕರ ಸ್ಮಾರಕ ನಿರ್ಮಾಣಕ್ಕೆ ಸ್ವಾಗತ ಕೋರಿರುವ ಜಿಲ್ಲೆಯ ಜನ ಸರ್ಕಾರಿ ಮೆಡಿಕಲ ಕಾಲೇಜಿನಲ್ಲಿ 100 ಸೀಟು ಹೆಚ್ಚಳದಿಂದ ಜಿಲ್ಲೆಗೆ ಯಾವ ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ. ಏಕೆಂದರೆ ವೈದ್ಯಕೀಯ ಸೀಟುಗಳ ಹಂಚಿಕೆ ರಾಜ್ಯ ಮಟ್ಟದಲ್ಲಿ ನಡೆಯುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದರಿಂದ ಎಷ್ಟರಮಟ್ಟಿನ ಅನುಕೂಲವಿದೆ ಎನ್ನುತ್ತಾರೆ.

Source: Suvarna News