ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನಕ್ಕೆ ಕಾರಣ ಮೋಡ; ಕೊನೇ ಕ್ಷಣದಲ್ಲಿ ಪೈಲಟ್ಗಳು ಮಾಡಿಲ್ಲ ತುರ್ತುಕರೆ, ಇಂದು ವರದಿ ಸಲ್ಲಿಸುವ ಸಾಧ್ಯತೆ
ದೆಹಲಿ: ಡಿಸೆಂಬರ್ 8 ರಂದು ತಮಿಳುನಾಡಿವ ಕೂನೂರ್ ಬಳಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 12 ಸೇನಾ ಅಧಿಕಾರಿಗಳು ಮೃತಪಟ್ಟ ಪ್ರಕರಣದ ತನಿಖಾ ವರದಿಯನ್ನು ಇಂದು ಮೂರೂ ಸೇವೆಗಳ (ಭೂಸೇನೆ, ವಾಯುಸೇನೆ, ನೌಕಾಪಡೆ) ತನಿಖಾ ತಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಗೆ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಡಿ.8ರಂದು ನಡೆದ ಈ ದುರ್ಘಟನೆಯಿಂದ ರಾಷ್ಟ್ರಕ್ಕೆ ಶಾಕ್ ಆಗಿತ್ತು. ಅಂದು ಪತನವಾಗಿದ್ದು Mi-17V5 ಸೇನಾ ಚಾಪರ್. ಇದು ವಿವಿಐಪಿ ಹೆಲಿಕಾಪ್ಟರ್ ಆಗಿದ್ದು, ಪ್ರಮುಖ ವ್ಯಕ್ತಿಗಳು ಪ್ರಯಾಣ ಮಾಡುವಾಗ ಎಲ್ಲ ರೀತಿಯ ಪರಿಶೀಲನೆ ಮಾಡಿಯೇ ಕಳಿಸಲಾಗುತ್ತದೆ. ಹಾಗಿದ್ದಾಗ್ಯೂ ಕೂಡ ತಮಿಳುನಾಡಿನ ಬಳಿ ಪತನಗೊಂಡು ಪ್ರಮುಖ ಅಧಿಕಾರಿಗಳು ಮೃತಪಟ್ಟಿದ್ದರು.
ಚಾಪರ್ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸೇನೆಯ ಮೂರೂ ವಿಭಾಗಗಳಿಂದ ತನಿಖಾ ತಂಡ ನಿಯೋಜಿಸಲಾಗಿದ್ದು, ಅವರು ತಮ್ಮ ತನಿಖಾ ವರದಿಯನ್ನು ಇಂದು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ ಸೇನಾಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ಈ ಚಾಪರ್ ತುಂಬ ಕೆಳಗೆ ಹೋಗುತ್ತಿತ್ತು. ಅಲ್ಲಿಯೇ ಇದ್ದ ರೈಲ್ವೆ ಹಳಿಯನ್ನು ಅನುಸರಿಸಿ ಮೇಲೆ ಹಾರುತ್ತಿತ್ತು. ಆದರೆ ಅವರು ಹೋಗುತ್ತಿದ್ದ ದಾರಿಯಲ್ಲಿ ಒಮ್ಮೆಲೇ ಮೋಡದ ಹೊದಿಕೆ ಎದುರು ಬಂದಿದ್ದರಿಂದ, ಅದನ್ನು ತಪ್ಪಿಸಲು ಹೆಲಿಕಾಪ್ಟರ್ ಪೈಲಟ್ಗಳು ಪ್ರಯತ್ನ ಪಟ್ಟರು ಇದೇ ಅಪಘಾತಕ್ಕೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಎಎನ್ಐ ವರದಿ ಮಾಡಿದೆ. ಅಷ್ಟೇ ಅಲ್ಲ, ಈ ಹೆಲಿಕಾಪ್ಟರ್ನಲ್ಲಿ ಇದ್ದವರೆಲ್ಲ ಮಾಸ್ಟರ್ ಗ್ರೀನ್ ವರ್ಗಕ್ಕೆ ಸೇರಿದವರು. ಹೆಲಿಕಾಪ್ಟರ್, ವಿಮಾನ ಸಾರಿಗೆಯಲ್ಲಿ ಅತ್ಯಂತ ಉತ್ತಮ ಪೈಲಟ್ಗಳು ಎಂದು ಗುರುತಿಸಿಕೊಂಡವರು. ಕಡಿಮೆ ಗೋಚರತೆಯ ಸಂದರ್ಭದಲ್ಲೂ ಇವರು ಹೆಲಿಕಾಪ್ಟರ್ನ್ನು ಕೆಳಗೆ ಇಳಿಸುವಷ್ಟು ನುರಿತರು ಆಗಿದ್ದರೂ. ಅವರು ಸಾಗುತ್ತಿದ್ದ ಮಾರ್ಗದಲ್ಲಿಯೇ ಹೆಲಿಕಾಪ್ಟರ್ ಕೆಳಗೆ ಇಳಿಸಬಹುದಿತ್ತು. ಆದರೆ ಮೋಡದಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದರು. ಇದೇ ಕಾರಣಕ್ಕೆ ಕೆಳಗೆ ಬಿದ್ದು, ಬಂಡೆಗೆ ಅಪ್ಪಳಿಸಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ ಎಂದೂ ಎಎನ್ಐ ತಿಳಿಸಿದೆ.
ತುರ್ತು ಕರೆ ಮಾಡಿಲ್ಲ
ಚಾಪರ್ ಅಪಘಾತದ ಕೊನೇ ಹಂತದಲ್ಲಿ ಅದರಲ್ಲಿ ಇದ್ದ ಪೈಲಟ್ಗಳು ಸಮೀಪದ ಏರ್ಸ್ಟೇಶನ್ಗಳಿಗೆ ಯಾವುದೇ ಕರೆ ಮಾಡಿಲ್ಲ. ಹೀಗಾಗಿ ಅವರಿಗೆ ಕೊನೇ ಕ್ಷಣದವರೆಗೂ ಎಮರ್ಜನ್ಸಿ ಇದೆ ಎಂದು ಅನ್ನಿಸಲಿಲ್ಲ ಎನ್ನಿಸುತ್ತದೆ. ಎಲ್ಲವೂ ಒಂದೇ ಬಾರಿಗೆ ಆಗಿಹೋಯಿತು ಎಂದೂ ತನಿಖಾ ತಂಡಗಳ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಎಎನ್ಐ ತಿಳಿಸಿದೆ. ಇನ್ನು ಪ್ರಕರಣದ ತನಿಖೆಯ ನೇತೃತ್ವವನ್ನು ಭಾರತೀಯ ವಾಯು ಸೇನೆ (IAF) ಅಧಿಕಾರಿ ವಹಿಸಿದ್ದರು. ಹಾಗೇ, ಈ ತಂಡದಲ್ಲಿ ನೇವಿ ಚಾಪರ್ ಪೈಲಟ್ ಮತ್ತು ಸೇನಾ ಅಧಿಕಾರಿಯೊಬ್ಬರು ಇದ್ದಾರೆ ಎಂದೂ ಹೇಳಲಾಗಿದೆ.
Source: tv9kannada